ನವದೆಹಲಿ: ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಎಂ.ವಿ. ಗಂಗಾ ವಿಲಾಸ್ ಕ್ರೂಸ್ ಸಿಕ್ಕಿಹಾಕಿಕೊಂಡಿಲ್ಲ. ಇದು ಸಿಲುಕಿಕೊಂಡಿದೆ ಎಂದು ಹೇಳುವ ವರದಿಗಳು ಸಂಪೂರ್ಣ ಸುಳ್ಳು ಎಂದು ಗಂಗಾ ವಿಲಾಸ್ ನಡೆಸುತ್ತಿರುವ ಎಕ್ಸೋಟಿಕ್ ಹೆರಿಟೇಜ್ ಗ್ರೂಪ್‌ನ ಅಧ್ಯಕ್ಷ ರಾಜ್ ಸಿಂಗ್ ತಿಳಿಸಿದ್ದಾರೆ. “ನೌಕೆಯು ವೇಳಾಪಟ್ಟಿಯ ಪ್ರಕಾರ ಪಾಟ್ನಾ ತಲುಪಿದೆ” ಎಂದು ಅವರು ತಿಳಿಸಿದ್ದಾರೆ.
ಗಂಗಾ ನದಿಯ ಆಳವಿಲ್ಲದ ನೀರಿನಿಂದಾಗಿ ಹಡಗು ತನ್ನ 51 ದಿನಗಳ ಪ್ರಯಾಣದ ಮೂರನೇ ದಿನದಲ್ಲಿ ಬಿಹಾರದ ಛಾಪ್ರಾದಲ್ಲಿ ಸಿಲುಕಿಕೊಂಡಿತು ಮತ್ತು ಹಲವಾರು ಸಣ್ಣ ದೋಣಿಗಳು ಪ್ರವಾಸಿಗರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದವು ಎಂದು ಹಲವು ವರದಿಗಳು ಹೇಳಿವೆ. ಆದರೆ ಕ್ರೂಸ್ ಸಿಲುಕಿ ಹಾಕಿಕೊಂಡಿಲ್ಲ ಎಂದು ತಿಳಿದುಬಂದಿದೆ.
ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡಿರುವ ಜಗತ್ತಿನ ಅತಿ ಉದ್ದದ ಎಂ.ವಿ. ಗಂಗಾ ವಿಲಾಸ್ ಕ್ರೂಸ್ ವಾರಾಣಸಿಯಿಂದ ಬಾಂಗ್ಲಾ ಮೂಲಕ ಅಸ್ಸಾಂನ ದಿಬ್ರುಗಢ ಅನ್ನು ತಲುಪಲಿದೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಟೆಂಟ್ ಸಿಟಿಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದರು. ಎಂ.ವಿ. ಗಂಗಾ ವಿಲಾಸ್ ಮೂರು ಡೆಕ್‌ಗಳನ್ನು ಹೊಂದಿದ್ದು, 36 ಪ್ರವಾಸಿಗರ ಸಾಮರ್ಥ್ಯದೊಂದಿಗೆ 18 ಸೂಟ್‌ಗಳನ್ನೂ ಹೊಂದಿದೆ.