ಐಷಾರಾಮಿ ಕಾರುಗಳನ್ನು ಖರೀದಿಸಬೇಕು ಅನ್ನೋ ಆಸೆ ಸಹಜ. ಆದರೆ ಆರ್ಥಿಕ ಮುಗ್ಗಟ್ಟಿನಿಂದಾಗಿ ಬಡ ಮತ್ತು ಮಧ್ಯಮವರ್ಗದವರ ಈ ಕನಸು ನನಸಾಗುವುದೇ ಇಲ್ಲ. ಹಾಗಂತ ನಿರಾಶರಾಗಬೇಡಿ, ಭಾರತದಲ್ಲಿ ಆಡಿ, ಬಿಎಂಡಬ್ಲ್ಯುನಂತಹ ಐಷಾರಾಮಿ ಕಾರುಗಳು ಕೇವಲ 2 ರಿಂದ 3 ಲಕ್ಷ ರೂಪಾಯಿಗೆ ಸಿಗುತ್ತವೆ. ಅಗ್ಗದ ಬೆಲೆಗೆ ದುಬಾರಿ ಕಾರುಗಳು ದೊರೆಯುವ ಏಕಮಾತ್ರ ಸ್ಥಳವೆಂದರೆ ದೆಹಲಿ.
ಇಲ್ಲಿ ದೆಹಲಿ ಪೊಲೀಸರು ಐಷಾರಾಮಿ ಕಾರುಗಳು ಸೇರಿದಂತೆ ಇಲಾಖೆ ವಶಪಡಿಸಿಕೊಂಡಿರುವ ವಾಹನಗಳನ್ನು ಅತ್ಯಂತ ಕಡಿಮೆ ಬೆಲೆಗೆ ಹರಾಜು ಹಾಕುತ್ತಾರೆ. ದೆಹಲಿ ಪೊಲೀಸರು ಕಾಲಕಾಲಕ್ಕೆ ಕೆಲವು ಅಪರಾಧಗಳಲ್ಲಿ ವಶಪಡಿಸಿಕೊಂಡ ವಾಹನಗಳನ್ನು ಅಥವಾ ಮಾಲೀಕರು ತೊರೆದ ವಾಹನಗಳನ್ನು ಹರಾಜು ಹಾಕಿಬಿಡುತ್ತಾರೆ. ಆಡಿ, BMW, ಮರ್ಸಿಡಿಸ್ ಮತ್ತಿತ್ತರ ವಿದೇಶಿ ಬ್ರಾಂಡ್‌ಗಳ ಐಷಾರಾಮಿ ಕಾರುಗಳು ಕೂಡ ಹರಾಜಿನಲ್ಲಿ ಲಭ್ಯವಿರುತ್ತವೆ.
ಐಷಾರಾಮಿ ಕಾರು ಎಂದಾಕ್ಷಣ ಅವು ಸಂಪೂರ್ಣ ಸುಸ್ಥಿತಿಯಲ್ಲಿರುತ್ತವೆ ಎಂದೇನಿಲ್ಲ. ಹರಾಜಿಗಿಡುವ ಈ ವಾಹನಗಳು ಸಾಮಾನ್ಯವಾಗಿ ಅಪಘಾತಕ್ಕೀಡಾಗಿರುತ್ತವೆ ಅಥವಾ ಹಳೆಯದಾಗಿರುತ್ತವೆ. ಅವುಗಳನ್ನು ದುರಸ್ತಿ ಮಾಡಿಸಿಕೊಳ್ಳಬೇಕು. ವಾಹನಗಳ ಬೆಲೆಗಳನ್ನು ಅವುಗಳ ಸ್ಥಿತಿಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ, ಹಾಗಾಗಿ ಕಾರುಗಳು ಅಗ್ಗದ ಬೆಲೆಗೆ ದೊರೆಯುತ್ತವೆ.
ಈ ಹರಾಜಿನಲ್ಲಿ ಭಾಗವಹಿಸಲು ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಜನರು ಬರುತ್ತಾರೆ. ಅಷ್ಟೇ ಅಲ್ಲ ದೇಶದ ಮೂಲೆ ಮೂಲೆಯಿಂದಲೂ ವಾಹನಪ್ರಿಯರು ಆಗಮಿಸುತ್ತಾರೆ. ಆದಾಗ್ಯೂ ಹರಾಜಿನಲ್ಲಿ ಖರೀದಿಸಿದ ಕಾರುಗಳಿಗೆ ಯಾವುದೇ ಖಾತರಿ ಇರುವುದಿಲ್ಲ. ಖರೀದಿಸುವ ಮೊದಲು ಅವುಗಳನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು. ಇದಲ್ಲದೆ ಕಾನೂನು ತೊಡಕುಗಳು ಎದುರಾಗದಂತೆ ಖರೀದಿದಾರನು ವಾಹನದ ಎಲ್ಲಾ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಬೇಕು.
ಇಂತಹ ಹರಾಜುಗಳ ಬಗ್ಗೆ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್ ಅಥವಾ ಸ್ಥಳೀಯ ಪತ್ರಿಕೆಗಳಲ್ಲಿ ಮಾಹಿತಿ ಇರುತ್ತದೆ. ಇದರಲ್ಲಿ ಪಾಲ್ಗೊಳ್ಳಲು ಅನುಸರಿಸಬೇಕಾದ ನಿಯಮಗಳ ವಿವರ ಕೂಡ ಲಭ್ಯವಿರುತ್ತದೆ. ಕಡಿಮೆ ಬಜೆಟ್‌ನಲ್ಲಿ ಐಷಾರಾಮಿ ಕಾರುಗಳನ್ನು ಖರೀದಿಸಲು ಬಯಸುವವರಿಗೆ ಈ ಪ್ರಕ್ರಿಯೆ ತುಂಬಾ ಪ್ರಯೋಜನಕಾರಿ.