ಮುಂಬೈ: ಐಷಾರಾಮಿ ಬಸ್ ಚಾಲಕನೊಬ್ಬ 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಗೋಣಿಚೀಲದಲ್ಲಿ ಹಾಕಿ ಪೆಟ್ರೋಲ್ ಬಂಕ್ ಬಳಿ ಎಸೆದು ಪರಾರಿಯಾಗಿದ್ದಾನೆ.
ಮುಂಬೈ-ಅಹಮದಾಬಾದ್ ಹೆದ್ದಾರಿಯ ವಾಲೀವ್ ಬಳಿ ಚೀಲದಲ್ಲಿದ್ದ ಬಾಲಕಿ ಪತ್ತೆಯಾಗಿದ್ದಾಳೆ. ಬಸ್ ಒಳಗೆ ಮಕ್ಕಳೊಂದಿಗೆ ಆಟವಾಡುತ್ತಿದ್ದ ಬಾಲಕಿಯ ಮೇಲೆ ಚಾಲಕ ಅತ್ಯಾಚಾರ ಎಸಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಭಾನುವಾರ ಮಧ್ಯಾಹ್ನ ಭಾಯಾಂದರ್ ಪಶ್ಚಿಮ ಬೋಲಾರಂ ಕೊಳಗೇರಿಯ ಬಳಿ ನಿಲ್ಲಿಸಿದ್ದ ಬಸ್ ನಲ್ಲಿ ಮಕ್ಕಳೊಂದಿಗೆ ಬಾಲಕಿ ಆಟವಾಡುತ್ತಿದ್ದಳು. ಒಮ್ಮೆಲೆ ಬಸ್ ಚಲಿಸುತ್ತಿದ್ದಂತೆ ಅದರಲ್ಲಿದ್ದ ಮಕ್ಕಳು ಹೊರಗೆ ಬಂದಿದ್ದಾರೆ. ಆದರೆ, ಹುಡುಗಿಗೆ ಹೊರಗೆ ಹೋಗಲು ಸಾಧ್ಯವಾಗಿಲ್ಲ. ಬೇರೆ ಸ್ಥಳಕ್ಕೆ ಬಸ್ ತೆಗೆದುಕೊಂಡು ಹೋದ ಚಾಲಕ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯ ಕತ್ತು ಹಿಸುಕಿದ್ದಾನೆ. ಆಕೆ ಮೃತಪಟ್ಟಿದ್ದಾಳೆ ಎಂದು ಭಾವಿಸಿದ ಚಾಲಕ ಗೋಣಿಚೀಲದಲ್ಲಿ ತುಂಬಿ ವಾಸೈನ ಫಾದರ್ ವಾಡಿಯಲ್ಲಿ ಇರುವ ಪೆಟ್ರೋಲ್ ಬಂಕ್ ಬಳಿ ಎಸೆದಿದ್ದಾನೆ.
ಪ್ರಜ್ಞೆ ಮರಳಿದ ನಂತರ ಚೀಲದಲ್ಲಿದ್ದ ಬಾಲಕಿ ಒದ್ದಾಡಿದ್ದು, ಇದನ್ನು ಗಮನಿಸಿದ ಸ್ಥಳೀಯರು ಚೀಲ ಬಿಚ್ಚಿ ನೋಡಿದಾಗ ಬಾಲಕಿ ಪತ್ತೆಯಾಗಿದ್ದಾಳೆ. ಅಸ್ವಸ್ಥಳಾಗಿದ್ದ ಆಕೆಯನ್ನು ವಾಸೈನ ಸರ್ ಡಿಎಂ. ಪೆಟೆಟ್ ಮುನ್ಸಿಪಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಲಕಿ ಬಹುಹೊತ್ತಿನವರೆಗೆ ಕಾಣದಿದ್ದಾಗ ಆಕೆಯ ತಾಯಿ ಭಯಾಂದರ್ ಪೋಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದು ಪೊಲೀಸರು ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಸಮೀಪದ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಚಾಲಕನನ್ನು ಗುರುತಿಸಿ ಆತನನ್ನು ಬಂಧಿಸಲಾಗಿದೆ. ಡಿಸೆಂಬರ್ 28 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.