ಬೆಂಗಳೂರು: ಕೋವಿಡ್ ನಂತರ ಚೀನಾದಲ್ಲಿ ಮತ್ತೆ ಶ್ವಾಸಕೋಶ ಸೋಂಕು ಕಾಣಿಸಿಕೊಂಡಿದ್ದು, ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಕೋವಿಡ್ ತಾಂತ್ರಿಕ ಸಮಿತಿ ಸೋಮವಾರ ಮಹತ್ವದ ಸಭೆ ನಡೆಸಿದೆ.
ಕೇಂದ್ರ ಸರ್ಕಾರದ ಎಚ್ಚರಿಕೆಯ ಬೆನ್ನಲ್ಲೇ ರಾಜ್ಯ ಕೋವಿಡ್ ತಾಂತ್ರಿಕ ಸಮಿತಿಯ ಸಭೆ ನಡೆಸಲಾಗಿದ್ದು, ಸಮಿತಿಯ ಶಿಫಾರಸಿನ ಅನ್ವಯ ಸರ್ಕಾರದ ಅನುಮತಿ ಪಡೆದು ಬುಧವಾರ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಾ. ರಂದೀಪ್ ಹೇಳಿದ್ದಾರೆ.
2019 ರಲ್ಲಿ ಇದೆ ಅವಧಿಯಲ್ಲಿ ಚೀನಾದಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು. ಆದರೆ ಚೀನಾ ಮಾಹಿತಿ ನೀಡದ ಕಾರಣ ವಿಶ್ವವ್ಯಾಪಿ ಸೋಂಕು ಹರಡಿತ್ತು. ಈಗ ಚೀನಾದಲ್ಲಿ ಚಳಿಗಾಲದಲ್ಲಿ ಉಸಿರಾಟ ಸಮಸ್ಯೆ ಏರಿಕೆ ಭೀತಿ ಹೆಚ್ಚಿದೆ. ಮಕ್ಕಳಲ್ಲಿ ನ್ಯೂಮೋನಿಯಾ ಜ್ವರ ಉಲ್ಬಣಿಸಿದೆ. ಬಹಳಷ್ಟು ಜನರಿಗೆ ಉಸಿರಾಟದ ಗಂಭೀರ ಸಮಸ್ಯೆ ಉಂಟಾಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಚೀನಾ ಮತ್ತೊಮ್ಮೆ ವೈರಸ್ ಹಾವಳಿಯಿಂದ ಕಂಗೆಟ್ಟಿದೆ.
ಈ ಬೆಳವಣಿಗೆಗಳ ನಡುವೆ ಕೇಂದ್ರ ಸರ್ಕಾರದ ಎಚ್ಚರಿಕೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೋವಿಡ್ ತಾಂತ್ರಿಕ ಸಮಿತಿ ಸಭೆ ನಡೆಸಿ ಮಾರ್ಗಸೂಚಿಗಳ ಜಾರಿಗೆ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.