ಬೆಂಗಳೂರು: ಬೆಂಗಳೂರಿನ ಲುಲು ಮಾಲ್ ನಲ್ಲಿ ವ್ಯಕ್ತಿಯೊಬ್ಬ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಪ್ರಕರಣ ಸಾಮಾಜಿಕ ಜಾಲತಾನಗಳಲ್ಲಿ ಭಾರಿ ವೈರಲ್ ಆಗಿತ್ತು. ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಈಗ ಆರೋಪಿ ನಿವೃತ್ತ ಮುಖ್ಯೋಪಾಧ್ಯಾಯ ಅಶ್ವತ್ಥನಾರಾಯಣ ಕೋರ್ಟ್ ಗೆ ಬಂದು ಶರಣಾಗಿದ್ದಾನೆ.
ಆರೋಪಿ ಶ್ವತ್ಥನಾರಾಯಣ (60) ನನ್ನು ಬಂಧಿಸಿರುವ ಮಾಗಡಿ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಈ ಚಪಲ ಚನ್ನಿಗನ ಇನ್ನಷ್ಟು ಕೃತ್ಯಗಳು ಬಯಲಾಗಿವೆ. ಪ್ರತಿ ವೀಕೆಂಡ್ ಗಳಲ್ಲಿ ಮಾಲ್ ಗಳಿಗೆ ಹೋಗಿ ಮಹಿಳೆಯರು, ಯುವತಿಯರಿಗೆ ಡಿಕ್ಕಿ ಹೊಡೆದು, ಮೈ ಕೈ ಮುಟ್ಟಿ ವಿಕೃತಿ ಮೆರೆಯುವುದನ್ನೇ ಈತ ಕಾಯಕವನ್ನಾಗಿ ಮಾಡಿಕೊಂಡಿದ್ದ ಎಂಬು ತಿಳಿದುಬಂದಿದೆ.
ಅ.29ರಂದು ಲುಲು ಮಾಲ್ ನಲ್ಲಿ ಬೇಕಂತಲೇ ಹಿಂದಿನಿಂದ ಬಂದು ಯುವತಿಗೆ ಡಿಕ್ಕಿ ಹೊಡೆದಿದ್ದ ಮಾತ್ರವಲ್ಲದೇ ಅಂದು ಅದೇ ಮಾಲ್ ನಲ್ಲಿ ಇನ್ನೂ ಐದಾರು ಯುವತಿಯರಿಗೆ ಇದೇ ರೀತಿ ಮಾಡಿ ಅಸಭ್ಯವಾಗಿ ವರ್ತಿಸಿದ್ದಾನೆ.
ಬೇರೆ ಬೇರೆ ಮಾಲ್ ಗಳಲ್ಲಿ ಆರೋಪಿ ಇದೇ ರೀತಿ ನಡೆದುಕೊಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ನಿವೃತ್ತ ಶಿಕ್ಷಕನಾಗಿರುವ ಅಶ್ವತ್ಥನಾರಾಯಣ, ಹಾಡುಗಾರ ಕೂಡ. ಆದರೆ ಲುಲು ಮಾಲ್ ನಲ್ಲಿ ನಡೆದಿದ್ದ ಒಂದು ಘಟನೆ ಬಳಿಕ ಸಿಸಿಟಿವಿ ಪರಿಶೀಲಿಸಿದಾಗ ನಿವೃತ್ತ ಶಿಕ್ಷಕನ ಹುಚ್ಚಾಟ ಬಟಾಬಯಲಾಗಿದೆ.