ಭಾರತದಲ್ಲಿ ಈಗಾಗಲೇ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಿರುವ ಯುಎಇ ಮೂಲದ ಲುಲು ಗ್ರೂಪ್ ಮುಂದಿನ ಮೂರು ವರ್ಷಗಳಲ್ಲಿ ಮತ್ತೆ 10,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ನಿರ್ಧರಿಸಿದೆ. ಇದರಿಂದಾಗಿ ದೇಶದಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಮೂಲಗಳು ಹೇಳಿವೆ.
ಲುಲು ಗ್ರೂಪ್ ವಿವಿಧ ಯೋಜನೆಗಳಿಗಾಗಿ ಭಾರತದಲ್ಲಿ ಈಗಾಗಲೇ 20,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದು, ಇದರಿಂದಾಗಿ 22 ಸಾವಿರ ಮಂದಿಗೆ ಉದ್ಯೋಗ ದೊರೆತಿದೆ. ಇದೀಗ ಮತ್ತೆ ಹತ್ತು ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುವುದರ ಜೊತೆಗೆ ಉದ್ಯೋಗ ಸೃಷ್ಟಿಗೂ ಒತ್ತು ನೀಡಲಾಗುತ್ತಿದ್ದು, ಒಟ್ಟು ಉದ್ಯೋಗಿಗಳ ಸಂಖ್ಯೆಯನ್ನು ಐವತ್ತು ಸಾವಿರಕ್ಕೆ ಹೆಚ್ಚಿಸಲಾಗುತ್ತದೆ.
ಈ ಕುರಿತಂತೆ ಮಾತನಾಡಿರುವ ಲುಲು ಗ್ರೂಪ್ ಚೇರ್ಮನ್ ಯೂಸುಫ್ ಅಲಿ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಅನಿವಾಸಿ ಭಾರತೀಯರು ಹೂಡಿಕೆ ಮಾಡುವುದಕ್ಕೆ ಈ ಹಿಂದೆ ಇದ್ದ ಕಠಿಣ ಕಾನೂನುಗಳಲ್ಲಿ ಸಡಿಲಿಕೆ ಮಾಡಿದ್ದು ಅನುಕೂಲಕರವಾಗಿದೆ. ಇದರಿಂದ ಹೂಡಿಕೆ ಜೊತೆಗೆ ಉದ್ಯೋಗ ಸೃಷ್ಟಿಗೂ ಅವಕಾಶವಾಗಲಿದೆ ಎಂದಿದ್ದಾರೆ.