ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯಿಂದ ಟೆಕ್ ಕಂಪನಿಗಳು ಉದ್ಯೋಗ ಕಡಿತವನ್ನು ಮುಂದುವರಿಸಿವೆ. ಈಗಾಗಲೇ ಮೈಕ್ರೋಸಾಫ್ಟ್, ಅಮೆಜಾನ್, ಗೂಗಲ್ ಸೇರಿದಂತೆ ಹಲವು ಕಂಪನಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದು, ಗೂಗಲ್ ಸಿಇಓ ಸುಂದರ ಪಿಚೈ 12,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಇ ಮೇಲ್ ಮೂಲಕ ಮಾಹಿತಿ ನೀಡಿದ್ದರು.
ಕೆಲಸ ಕಳೆದುಕೊಳ್ಳುತ್ತಿರುವ ಈ 12,000 ಮಂದಿಯಲ್ಲಿ ಗೂಗಲ್ ನಲ್ಲಿ ಕಳೆದ ಹದಿನಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಜಸ್ಟಿನ್ ಮೋರ್ ಕೂಡ ಒಬ್ಬರಾಗಿದ್ದು, ಆದರೆ ಅವರನ್ನು ಕೆಲಸದಿಂದ ತೆಗೆದು ಹಾಕಿರುವ ವಿಧಾನ ಮಾತ್ರ ಅತ್ಯಂತ ಕಠೋರವಾಗಿದೆ.
ಹಿಂದಿನ ದಿನದವರೆಗೂ ಜಸ್ಟಿನ್ ಮೋರ್ ಅವರು ಕೆಲಸ ಮಾಡಿದ್ದು, ಮಾರನೇ ದಿನ ಬೆಳಗಿನ ಜಾವ 3 ಗಂಟೆಗೆ ಅವರ ಗೂಗಲ್ ಅಕೌಂಟ್ ಅನ್ನು ಡಿ ಆಕ್ಟಿವೇಟ್ ಮಾಡಲಾಗಿದೆ. ಎಂದಿನಂತೆ ಕೆಲಸ ಮಾಡಲು ತಮ್ಮ ಲ್ಯಾಪ್ಟಾಪ್ ಆನ್ ಮಾಡಿದ ಜಸ್ಟಿನ್ ಮೋರ್ ಅವರಿಗೆ ಲಾಗಿನ್ ಆಗಲು ಸಾಧ್ಯವಾಗದಾಗ ಕೆಲಸ ಕಳೆದುಕೊಂಡ 12,000 ಮಂದಿಯ ಪೈಕಿ ತಾವೂ ಒಬ್ಬರು ಎಂಬುದು ಅರಿವಾಗಿದೆ.
ಈ ವಿಷಯವನ್ನು ಜಸ್ಟಿನ್ ಮೋರ್ ತಮ್ಮ ಲಿಂಕ್ಡಿನ್ ಅಕೌಂಟ್ ನಲ್ಲಿ ಹಾಕಿದ್ದು, ಇಷ್ಟು ಸುದೀರ್ಘ ಅವರಿಗೆ ತಮಗೆ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕೆ ಗೂಗಲ್ ಸಂಸ್ಥೆಗೆ ಧನ್ಯವಾದ ಹೇಳಿದ್ದಾರೆ. 2006ರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಗೂಗಲ್ ಸೇರ್ಪಡೆಗೊಂಡ ಜಸ್ಟಿನ್ ಮೋರ್ ಅವರಿಗೆ 2019 ರಲ್ಲಿ ಪ್ರಮೋಷನ್ ನೀಡಿ ಮ್ಯಾನೇಜರ್ ಸ್ಥಾನ ನೀಡಲಾಗಿತ್ತು. ಇದೀಗ 16 ವರ್ಷಗಳ ಬಳಿಕ ಕೆಲಸ ಕಳೆದುಕೊಂಡಿದ್ದಾರೆ.
ಜಸ್ಟಿನ್ ಮೋರ್ ಅವರನ್ನು ಕೆಲಸದಿಂದ ತೆಗೆದು ಹಾಕಿದ ವಿಧಾನ ನೆಟ್ಟಿಗರಲ್ಲಿ ಆಕ್ರೋಶ ಉಂಟು ಮಾಡಿದೆ. 16 ವರ್ಷಗಳ ಕಾಲ ಕೆಲಸ ಮಾಡಿರುವ ಉದ್ಯೋಗಿ ಜೊತೆ ಇಷ್ಟು ಕಠೋರವಾಗಿ ಕಂಪನಿ ವರ್ತಿಸಬಾರದಿತ್ತು ಎಂದು ಕಿಡಿಕಾರಿದ್ದಾರೆ. ಅಲ್ಲದೆ ಕಾರ್ಪೊರೇಟ್ ಜಗತ್ತಿನಲ್ಲಿ ಹಣಕ್ಕೆ ಮಾತ್ರ ಪ್ರಾಧಾನ್ಯ ನೀಡಲಾಗುತ್ತದೆ. ಮಾನವೀಯತೆಗೆ ಬೆಲೆಯೇ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.