ತನ್ನ ಸುಂದರ ವಾಸ್ತುಶೈಲಿಯಿಂದ ಪ್ರಯಾಣಿಕರ ಮನಸೂರೆಗೊಳ್ಳುವ ಲಖನೌದ ಚಾರ್‌ಬಾಗ್ ರೈಲ್ವೇ ನಿಲ್ದಾಣದ ಕುರಿತು ರೈಲ್ವೇ ಸಚಿವಾಲಯ ಆಸಕ್ತಿಕರ ವಿಷಯವೊಂದನ್ನು ಹಂಚಿಕೊಂಡಿದೆ.
“ವೈಮಾನಿಕ ನೋಟದಿಂದ ಚಾರ್‌ಬಾಗ್ ರೈಲ್ವೇ ನಿಲ್ದಾಣ ಚೆಸ್ ಬೋರ್ಡ್‌ನಂತೆ ಕಾಣುತ್ತದೆ. ನಿಲ್ದಾಣದ ಗುಮ್ಮಟಗಳು ಹಾಗೂ ಕಂಬಗಳು ಚೆಸ್ ಆಟದ ಕಾಯಿಗಳಂತೆ ಭಾಸವಾಗುತ್ತವೆ. ತನ್ನ ವಿಶಿಷ್ಟ ವಾಸ್ತುಶೈಲಿಯಿಂದ ಈ ನಿಲ್ದಾಣ ಬಹಳ ಜನರನ್ನು ಸೆಳೆಯುತ್ತದೆ” ಎಂದು ರೈಲು ನಿಲ್ದಾಣದ ಫೋಟೋದೊಂದಿಗೆ ಪೋಸ್ಟ್ ಮಾಡಲಾಗಿದೆ.
“ನಿಮಗಿದು ಗೊತ್ತೇ ? ನವಾಬರ ನಗರವಾದ ಚಾರ್‌ಬಾಗ್‌ನಲ್ಲಿರುವ ಲಖನೌ ರೈಲ್ವೇ ನಿಲ್ದಾಣವು ಅದ್ಭುತ ವಾಸ್ತುಶಿಲ್ಪ ಹೊಂದಿದ್ದು, ಮೇಲಿಂದ ನೋಡಿದಾಗ ಚೆಸ್‌ಬೋರ್ಡ್‌ನಂತೆ ಕಾಣುತ್ತದೆ” ಎಂದು ರೈಲ್ವೇ ಸಚಿವಾಲಯ ಟ್ವಿಟರ್‌ನಲ್ಲಿರುವ ತನ್ನ ಅಧಿಕೃತ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ.
ಅದಾಗಲೇ 95,000 ವೀಕ್ಷಣೆಗಳನ್ನು ಕಂಡಿರುವ ಈ ಪೋಸ್ಟ್‌ಗೆ ನೆಟ್ಟಿಗರಿಂದ ಪ್ರಶಂಸನೀಯ ಕಾಮೆಂಟ್‌ಗಳು ಹರಿದು ಬರುತ್ತಿವೆ. ಕೆಲವರಿಗೆ ಈ ನಿಲ್ದಾಣ ಚೆಸ್ ಬೋರ್ಡ್‌ನಂತೆ ನಿಜಕ್ಕೂ ಕಾಣುತ್ತಿದೆಯೇ ಎನಿಸುತ್ತಿದ್ದು, ಇನ್ನೂ ಕೆಲವರಿಗೆ ಈ ನಿಲ್ದಾಣದ ವಾಸ್ತುಶೈಲಿ ಬಹಳ ಮೆಚ್ಚುಗೆಯಾಗಿದೆ.