ಕಳ್ಳತನಕ್ಕೆಂದು ಬಂದಿದ್ದವನು ಮನೆಯಲ್ಲಿದ್ದ ಮದ್ಯದ ಬಾಟಲಿಗಳನ್ನ ಖಾಲಿ ಮಾಡಿ ನಂತರ ಮದ್ಯದ ನಶೆಯಲ್ಲಿ ಮನೆಯಲ್ಲೇ ಮಲಗಿದ ಘಟನೆ ಉತ್ತರಪ್ರದೇಶದ ಲಖ್ನೋದಲ್ಲಿ ನಡೆದಿದೆ. ಲಕ್ನೋದಲ್ಲಿನ ಕುಟುಂಬವೊಂದು ಮದುವೆ ಸಮಾರಂಭಕ್ಕೆಂದು ತೆರಳಿತ್ತು. ಅವರು ವಾಪಸ್ ಬಂದಾಗ ತಮ್ಮ ಮಲಗುವ ಕೋಣೆಯಲ್ಲಿ ವ್ಯಕ್ತಿಯೊಬ್ಬರು ಗಾಢ ನಿದ್ದೆಯಲ್ಲಿದ್ದುದನ್ನು ಕಂಡು ಆಘಾತಕ್ಕೊಳಗಾಗಿದ್ದರು. ಆತನ ಸುತ್ತಲೂ ಮದ್ಯದ ಬಾಟಲಿಗಳು ಹರಡಿಕೊಂಡಿದ್ದವು ಮತ್ತು ಮನೆಯ ಕೆಲವು ಭಾಗಗಳಲ್ಲಿ ವಸ್ತುಗಳೆಲ್ಲಾ ಅಸ್ತವ್ಯಸ್ತವಾಗಿದ್ದವು.
ಸಮಗ್ರವಾಗಿ ಹುಡುಕಿದಾಗ 8 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ನಾಪತ್ತೆಯಾಗಿರುವುದನ್ನು ಕುಟುಂಬದವರು ಪತ್ತೆ ಮಾಡಿದರು. ನಂತರ ಕುಟುಂಬದವರು ಪೊಲೀಸರಿಗೆ ದೂರು ನೀಡಿದಾಗ ಕಳ್ಳತನಕ್ಕೆಂದು ಬಂದಿದ್ದ ವ್ಯಕ್ತಿ ಈತನನ್ನು ಅಲ್ಲೇ ಬಿಟ್ಟು ಹೋಗಿದ್ದ ಎಂಬುದು ಗೊತ್ತಾಗಿದೆ. ಮನೆಯಲ್ಲಿ ಸಿಕ್ಕ ವಸ್ತುಗಳನ್ನು ದೋಚಿದ ಬಳಿಕ ಮನೆಯಲ್ಲಿದ್ದ ಮದ್ಯ ಕುಡಿದು ನಶೆಯಲ್ಲಿದ್ದ ಈತನನ್ನು ಮನೆಯಲ್ಲೇ ಬಿಟ್ಟು ಹೋಗಿದ್ದ ಎಂಬುದು ಬಯಲಾಗಿದೆ. ಲಕ್ನೋದ ಕ್ಯಾಂಟ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಮನೆಯಿಂದ 100 ಗ್ರಾಂ ಚಿನ್ನಾಭರಣ, 1.5 ಲಕ್ಷ ಮೌಲ್ಯದ 2 ಕೆಜಿ ಬೆಳ್ಳಿ ವಸ್ತುಗಳು, 50 ಸಾವಿರ ಮೌಲ್ಯದ 40 ಸೀರೆಗಳು, 6 ಲಕ್ಷ ನಗದು ನಾಪತ್ತೆಯಾಗಿದೆ ಎಂದು ಶರ್ವಾನಂದ್ ಕುಟುಂಬದವರು ತಿಳಿಸಿದ್ದಾರೆ.
ಶರ್ವಾನಂದ್ ಮನೆಯವರು ಆ ವ್ಯಕ್ತಿ ಏಳುವವರೆಗೂ ಕಾದು ಪೊಲೀಸರಿಗೆ ಒಪ್ಪಿಸಿದ್ದಾರೆ. ತನಿಖೆಯ ಸಮಯದಲ್ಲಿ ಲಕ್ನೋದ ಶಾರದಾ ನಗರದ ಸಲೀಂ ಎಂದು ಗುರುತಿಸಲಾದ ವ್ಯಕ್ತಿ ಶರ್ವಾನಂದ್ ರವರ ಮನೆಯನ್ನು ಗುರಿಯಾಗಿಸಿಕೊಂಡ ಇಬ್ಬರು ಸದಸ್ಯರ ಕಳ್ಳರ ಗುಂಪಿನಲ್ಲಿ ಭಾಗಿಯಾಗಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
ಇಬ್ಬರು ಮನೆಗೆ ನುಗ್ಗಿ ಬೆಲೆಬಾಳುವ ವಸ್ತುಗಳನ್ನು ಹುಡುಕಿದ್ದಾರೆ. ಸಲೀಂ ಹೇಳುವಂತೆ ಆತನ ಸಹಚರ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಮದ್ಯವನ್ನು ಕುಡಿಸಿದ್ದಾನೆ. ಮದ್ಯದ ಅಮಲಿನಲ್ಲಿ ಸಲೀಂ ಮಲಗುವ ಕೋಣೆಯಲ್ಲಿ ಹುಡುಕಾಡುತ್ತಿದ್ದ. ನಂತರ ಅವನ ಸಹಚರ ದೋಚಿಕೊಂಡ ವಸ್ತುಗಳೊಂದಿಗೆ ಓಡಿಹೋದ. ಈತ ಮದ್ಯದ ಅಮಲಿನಲ್ಲಿ ಕೋಣೆಯಲ್ಲೇ ಮಲಗಿದ್ದ. ಪೊಲೀಸರು ಇದೀಗ ಆತನ ಸಹಚರನನ್ನು ಹುಡುಕುತ್ತಿದ್ದಾರೆ.