ಮುಸ್ಲಿಂ ಧರ್ಮಗುರು ಹಾಗೂ ಅಖಿಲ ಭಾರತ ಶಿಯಾ ವೈಯಕ್ತಿಕ ಕಾನೂನು ಮಂಡಳಿಯ ಕಾರ್ಯದರ್ಶಿ ಮೌಲಾನಾ ಯಾಸೂಬ್ ಅಬ್ಬಾಸ್ ಲಕ್ನೋದ ಬಾರಾ ಇಮಾಂಬಾರಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಒಂದು ವೇಳೆ ಉತ್ತರ ಪ್ರದೇಶ ಸರ್ಕಾರವು ಧಾರ್ಮಿಕ ಸ್ಥಳಗಳಿಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸದೇ ಹೋದಲ್ಲಿ ಶಿಯಾಗಳು ಆಂದೋಲನ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ವೈರಲ್ ಡ್ಯಾನ್ಸ್ ವಿಡಿಯೋವೊಂದರ ಕುರಿತು ವಿರೋಧಗಳು ಕೇಳಿ ಬಂದ ಬೆನ್ನಲ್ಲೇ ಮೌಲಾನಾ ಯಾಸೂಬ್ ಸರ್ಕಾರಕ್ಕೆ ಈ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಬಾರಾ ಇಮಾಂಬಾರ ಧಾರ್ಮಿಕ ಸ್ಥಳವಾಗಿದೆ. ಇದು ಪ್ರವಾಸಿ ತಾಣವಲ್ಲ. ಹೀಗಾಗಿ ಕೂಡಲೇ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಬೇಕು ಎಂದು ಹೇಳಿದ್ದಾರೆ.
ಲಕ್ನೋ ಆಡಳಿತ ಮಂಡಳಿಯು ಈ ವರ್ಷದ ಜೂನ್ ತಿಂಗಳಿನಿಂದ ಐತಿಹಾಸಿಕ ಬಾರಾ ಇಮಾಂಬರಕ್ಕೆ ಕೋವಿಡ್ ಮಾರ್ಗಸೂಚಿಗಳ ಸಮೇತ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡಿತ್ತು. ಜಿಲ್ಲಾಡಳಿತ ಪ್ರಕಾರ ಬಾರಾ ಇಮಾಂಬಾರಕ್ಕೆ ಒಂದು ಬಾರಿಗೆ 200 ಮಂದಿಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಚೋಟಾ ಇಮಾಂಬಾರಕ್ಕೆ 40 ಮಂದಿಗೆ ಒಮ್ಮೆಲೆ ಪ್ರವೇಶಕ್ಕೆ ಅವಕಾಶವಿದೆ.
ಇಮಾಂಬಾರದ ಭದ್ರತಾ ಸಿಬ್ಬಂದಿ ಆವರಣದಲ್ಲಿ ಯಾವುದೇ ಕಾರಣಕ್ಕೆ ಜನಸಂದಣಿಯಾಗದಂತೆ ಎಚ್ಚರ ವಹಿಸಬೇಕು. ಅಲ್ಲದೇ ಸ್ಮಾರಕ ವೀಕ್ಷಣೆಗೆ ಸಮಯ ನಿಗದಿ ಮಾಡಲಾಗಿದೆ. ಸ್ಮಾರಕದ ಒಳಗೆ ಯಾವುದೇ ಆಹಾರ ಪದಾರ್ಥಗಳನ್ನು ಕೊಂಡೊಯ್ಯಲು ಅನುಮತಿ ನಿರಾಕರಿಸಲಾಗಿದೆ.