ಐಪಿಎಲ್ ಟಿ20 ಟೂರ್ನಿಗೆ ಈಗಾಗಲೇ ಎರಡು ತಂಡಗಳು ಸೇರ್ಪಡೆಗೊಂಡಿದ್ದು, ಲಕ್ನೋ ತನ್ನ ತಂಡದ ಹೆಸರನ್ನು ಘೋಷಿಸಿದೆ.
ಈ ತಂಡವು ʼಲಕ್ನೋ ಸೂಪರ್ ಜೈಂಟ್ಸ್ʼ ಎಂಬ ಹೆಸರಿನಿಂದ ಕಣಕ್ಕೆ ಇಳಿಯಲಿದೆ ಎಂದು ತಂಡದ ಮಾಲೀಕ ಸಂಜೀವ್ ಗೋಯೆಂಕಾ ತಿಳಿಸಿದ್ದು, ತಂಡದ ಹಳೆಯ ಹೆಸರಿನ ಮೂಲಕವೇ ಮತ್ತೊಮ್ಮೆ ಪಾದಾರ್ಪಣೆ ಮಾಡಲಿವೆ ಎಂದು ಹೇಳಿದ್ದಾರೆ.
2017 ರಲ್ಲಿ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರು ಪುಣೆ ಸೂಪರ್ ಜೈಂಟ್ಸ್ ಎಂಬ ಹೆಸರಿನಿಂದ ಭಾಗವಹಿಸಿದ್ದರು. ಅತ್ಯಂತ ದುಬಾರಿ ಮೊತ್ತ ತೆತ್ತು ಲಕ್ನೋ ತಂಡವನ್ನು ಈ ಬಾರಿ ಗೋಯೆಂಕಾ ಖರೀದಿಸಿದ್ದಾರೆ.
ಬರೋಬ್ಬರಿ 7090 ಕೋಟಿ ಮೊತ್ತ ನೀಡಿ ಈ ಫ್ರಾಂಚೈಸಿ ಪಡೆದಿದ್ದಾರೆ. ನಾಯಕರಾಗಿ ಕನ್ನಡಿಗ ಕೆ.ಎಲ್. ರಾಹುಲ್ ಈ ತಂಡವನ್ನು ಮುನ್ನಡೆಸಲಿದ್ದಾರೆ.
ಅಲ್ಲದೇ, ರವಿ ಬಿಷ್ಣೋಯ್ ಹಾಗೂ ಆಸ್ಟ್ರೇಲಿಯಾದ ಮಾರ್ಕಸ್ ಸ್ಟೋಯಿನಿಸ್ ಈಗಾಗಲೇ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜಿಂಬಾಬ್ವೆಯ ಆಂಡಿ ಫ್ಲವರ್ ಮುಖ್ಯ ಕೋಚ್ ಆಗಿ ನೇಮಕ ಹೊಂದಿದ್ದಾರೆ.
ಈಗಾಗಲೇ ಟೂರ್ನಿಯಲ್ಲಿ ಭಾಗವಹಿಸುವ 10 ತಂಡಗಳು 33 ಆಟಗಾರರನ್ನು ರಿಟೈನ್ ಮಾಡಿಕೊಂಡಿವೆ. ಫೆಬ್ರವರಿ 12 ಹಾಗೂ 13ರಂದು ಮೆಗಾ ಹರಾಜು ನಡೆಯಲಿದೆ.