ಸೌದಿ ಅರೇಬಿಯಾದಿಂದ ಮರಳಿದ್ದ ಪ್ರಯಾಣಿಕರಿಂದ ಲಕ್ನೋದಲ್ಲಿ 9 ಕೆಜಿ ತೂಕದ 77 ಚಿನ್ನದ ಬಿಸ್ಕಟ್ಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಕಂದಾಯ ಗುಪ್ತಚರ ನಿರ್ದೇಶನಾಲಯ ಮಾಹಿತಿ ನೀಡಿದೆ.
ಆಗ್ರಾ – ಲಕ್ನೋ ರಸ್ತೆಯಲ್ಲಿ ನಡೆದ ಹೈ ಸ್ಪೀಡ್ ಚೇಸಿಂಗ್ನಲ್ಲಿ ಇಬ್ಬರು ಪ್ರಯಾಣಿಕರನ್ನ ಅಡ್ಡಗಟ್ಟುವಲ್ಲಿ ಡಿಆರ್ಡಿಐ ಅಧಿಕಾರಿಗಳು ಯಶಸ್ವಿಯಾದರು. ಸೌದಿ ಅರೇಬಿಯಾದಿಂದ ಮರಳಿರುವ ಇಬ್ಬರು ಪ್ರಯಾಣಿಕರು ಭಾರೀ ಪ್ರಮಾಣದ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂಬ ಆರೋಪದ ಅಡಿಯಲ್ಲಿ ಈ ದಾಳಿ ನಡೆಸಲಾಗಿತ್ತು.
ಆರೋಪಿಗಳು ಲಕ್ನೋದ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಕಳ್ಳ ಸಾಗಣೆಯಿಂದ ಬಂದ ಈ ಚಿನ್ನದ ಬಿಸ್ಕೆಟ್ಗಳು ಮುಜಾಫರ್ ನಗರ ಜಿಲ್ಲೆಗೆ ವರ್ಗಾಯಿಸಲಾಗುತ್ತದೆ ಎಂಬ ಸುಳಿವು ಡಿಆರ್ಡಿಐ ಅಧಿಕಾರಿಗಳಿಗೆ ಸಿಕ್ಕಿತ್ತು.
ಲಕ್ನೋಗೆ ಆರೋಪಿಗಳು ಬಂದಿಳಿಯುವವರೆಗೂ ವಿಮಾನ ನಿಲ್ದಾಣದ ಸುತ್ತ ಡಿಆರ್ಡಿಐ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದರು. ಆರೋಪಿಗಳನ್ನು ಬೆನ್ನಟ್ಟಿದ ಅಧಿಕಾರಿಗಳು ಆಗ್ರಾ – ಲಕ್ನೋ ಎಕ್ಸ್ಪ್ರೆಸ್ ವೇನಲ್ಲಿ ಅವರನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಸೌದಿ ರಾಜಧಾನಿ ರಿಯಾದ್ನ ಇಬ್ಬರು ಪ್ರಯಾಣಿಕರು ಸೇರಿದಂತೆ ನಾಲ್ವರು ಕಾರಿನೊಳಗೆ ಇದ್ದರು ಎನ್ನಲಾಗಿದೆ.
ದಾಳಿ ವೇಳೆ ಅಧಿಕಾರಿಗಳು 77 ಚಿನ್ನದ ಬಿಸ್ಕತ್ಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ಬೆಲ್ಟ್ಗಳಲ್ಲಿ ಹಾಗೂ ಒಳ ಉಡುಪಿನ ಜೇಬುಗಳಲ್ಲಿ ಚಿನ್ನವನ್ನು ಅಡಗಿಸಿಟ್ಟಿದ್ದರು ಎನ್ನಲಾಗಿದೆ.