ನವದೆಹಲಿ: ಕೇಂದ್ರ ಸರಕು ಮತ್ತು ಸೇವಾ ತೆರಿಗೆ(ಎರಡನೇ ತಿದ್ದುಪಡಿ) ಮಸೂದೆ 2023 ಅನ್ನು ಲೋಕಸಭೆ ಅಂಗೀಕರಿಸಿದೆ.
ಕೇಂದ್ರ ಸರ್ಕಾರವು ಮೇಲ್ಮನವಿ ನ್ಯಾಯಾಧಿಕರಣವನ್ನು ಸ್ಥಾಪಿಸಲು ಅನುವು ಮಾಡಿಕೊಡುವ ಕೇಂದ್ರ ಸರಕು ಮತ್ತು ಸೇವಾ ತೆರಿಗೆ(CGST) ಕಾಯಿದೆ, 2017 ಅನ್ನು ತಿದ್ದುಪಡಿ ಮಾಡಲು ನಿಬಂಧನೆಗಳನ್ನು ಮಸೂದೆಯು ಹೊಂದಿದೆ.
ಟ್ರಿಬ್ಯೂನಲ್‌ನ ಅಧ್ಯಕ್ಷರ ವಯೋಮಿತಿಯನ್ನು 67 ರಿಂದ 70 ವರ್ಷಗಳಿಗೆ ಮತ್ತು ಸದಸ್ಯರ ವಯೋಮಿತಿಯನ್ನು 65 ರಿಂದ 67 ವರ್ಷಗಳಿಗೆ ಹೆಚ್ಚಿಸುವ ನಿಬಂಧನೆಗಳನ್ನು ಮಸೂದೆ ಹೊಂದಿದೆ. ನ್ಯಾಯಮಂಡಳಿಯು ಅಧ್ಯಕ್ಷರು, ನ್ಯಾಯಾಂಗ ಸದಸ್ಯರು ಮತ್ತು ಇಬ್ಬರು ತಾಂತ್ರಿಕ ಸದಸ್ಯರನ್ನು ಒಳಗೊಂಡಿದೆ.
ಕನಿಷ್ಠ 10 ವರ್ಷಗಳ ಅನುಭವ ಹೊಂದಿರುವ ವಕೀಲರನ್ನು ನ್ಯಾಯಾಂಗ ಸದಸ್ಯರನ್ನಾಗಿ ನೇಮಿಸಲು ಮಸೂದೆ ಅವಕಾಶ ನೀಡುತ್ತದೆ. ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯಿದೆ 2017 ಮತ್ತು ನ್ಯಾಯಮಂಡಳಿ ಸುಧಾರಣಾ ಕಾಯ್ದೆ 2021 ರ ವಿವಿಧ ನಿಬಂಧನೆಗಳನ್ನು ಜೋಡಿಸಲು, ಸರಕು ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಗಳ ಕಾರ್ಯಾಚರಣೆಗಾಗಿ ಆಡಳಿತಾತ್ಮಕ ಪ್ರಕ್ರಿಯೆಯನ್ನು ಪ್ರಾರಂಭಿಸಲು ಮಸೂದೆಯನ್ನು ತರಲಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಸೂದೆ ಮಂಡಿಸಿ, ಜಿಎಸ್‌ಟಿಯು ಆರ್ಥಿಕತೆಯಲ್ಲಿ ಪರಿವರ್ತನೆಯ ಬದಲಾವಣೆಗಳನ್ನು ತಂದಿದೆ. ಭಾರತದ ಮುಖ್ಯ ನ್ಯಾಯಾಧೀಶರು ತಮ್ಮ ಆಡಳಿತಾತ್ಮಕ ಸಾಮರ್ಥ್ಯದ ಅಡಿಯಲ್ಲಿ, ಸೇವಾ ನಿಯಮಗಳ ಕೆಲವು ಅಂಶಗಳ ಬಗ್ಗೆ ಹಣಕಾಸು ಸಚಿವಾಲಯದ ಗಮನ ಸೆಳೆದಿದ್ದರಿಂದ ಜಿಎಸ್‌ಟಿ ಮಸೂದೆಯಲ್ಲಿ ತಿದ್ದುಪಡಿ ತರಲಾಗಿದೆ ಎಂದು ಹೇಳಿದ್ದಾರೆ.
ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಸಮಿತಿಯು ಅಧ್ಯಕ್ಷರು ಮತ್ತು ನ್ಯಾಯಮಂಡಳಿಯ ತಾಂತ್ರಿಕ ಮತ್ತು ನ್ಯಾಯಾಂಗ ಸದಸ್ಯರ ಆಯ್ಕೆ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿಯ ನಿಶಿಕಾಂತ್ ದುಬೆ, ಬಿಜೆಡಿಯ ಸರ್ಮಿಷ್ಠಾ ಸೇಥಿ, ಶಿವಸೇನೆಯ ಧೈರ್ಯಶೀಲ ಮಾನೆ ಮತ್ತು ವೈಎಸ್‌ಆರ್ ಕಾಂಗ್ರೆಸ್‌ನ ಶ್ರೀಕೃಷ್ಣ ದೇವರಾಯಲು ಕೂಡ ಮಸೂದೆಯ ಬಗ್ಗೆ ಮಾತನಾಡಿದರು.