ಬೆಂಗಳೂರು: ಅಡುಗೆ ಅನಿಲಕ್ಕೆ ಸಬ್ಸಿಡಿ ಪಡೆಯುತ್ತಿರುವವರು ಡಿಸೆಂಬರ್ 31ರ ಒಳಗೆ ಇ-ಕೆವೈಸಿ ಮಾಡಿಸಬೇಕೆಂಬ ವದಂತಿ ನಂಬಿದ ಗ್ಯಾಸ್ ಏಜೆನ್ಸಿಗಳ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ನೂಕುನುಗ್ಗಲು ಉಂಟಾಗಿದೆ.
ಮಂಡ್ಯ, ಹಾಸನ, ಕೊಪ್ಪಳ, ಶಿವಮೊಗ್ಗ ಸೇರಿದಂತೆ ಹಲವೆಡೆ ವದಂತಿ ನಂಬಿದ ಜನ ಗ್ಯಾಸ್ ಏಜೆನ್ಸಿಗಳ ಎದುರು ಇ- ಕೆವೈಸಿ ಮಾಡಿಸಲು ಮುಗಿಬಿದ್ದಿದ್ದಾರೆ. ಡಿಸೆಂಬರ್ 31ರೊಳಗೆ ಇ-ಕೆವೈಸಿ ಮಾಡಿಸಿದವರಿಗೆ ಮಾತ್ರ ಸಬ್ಸಿಡಿ ಸಿಗಲಿದೆ. ಕೇಂದ್ರ ಸರ್ಕಾರ ಗ್ರಾಹಕರ ಖಾತೆಗೆ ಹಣ ಹಾಕಲಿದೆ ಎನ್ನುವ ವದಂತಿ ಹರಡಿದೆ. ಇದನ್ನು ನಂಬಿದ ಜನ ಗ್ಯಾಸ್ ಏಜೆನ್ಸಿ ಗಳ ಎದುರು ಮುಗಿಬಿದ್ದಿದ್ದಾರೆ.
ಆಧಾರ್ ಇ-ಕೆವೈಸಿ ಮಾಡಿಸಲು ಅಂತಿಮ ದಿನಾಂಕ ನಿಗದಿಪಡಿಸಿಲ್ಲ
ಅಡುಗೆ ಅನಿಲ ಸಂಪರ್ಕ ಹೊಂದಿರುವವರು ಆಧಾರ್ ಇ-ಕೆವೈಸಿ ಮಾಡಿಸಲು ಅಂತಿಮ ದಿನಾಂಕವನ್ನು ಕೇಂದ್ರ ಸರ್ಕಾರವು ನಿಗದಿಪಡಿಸಿರುವುದಿಲ್ಲ. ಸಾರ್ವಜನಿಕರು ತಮ್ಮ ಬಿಡುವಿನ ವೇಳೆಯಲ್ಲಿ ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಆಧಾರ್ ಇ-ಕೆವೈಸಿ ಮಾಡಿಸಬಹುದಾಗಿದ್ದು, ಸಾರ್ವಜನಿಕರು ಆತಂಕದಿಂದ ಗ್ಯಾಸ್ ಏಜೆನ್ಸಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇರುವುದಿಲ್ಲ.
ಆದ್ದರಿಂದ ಅನಾವಶ್ಯಕವಾಗಿ ಗೊಂದಲ ಅಥವಾ ತಪ್ಪು ಮಾಹಿತಿಯಿಂದ ಗ್ಯಾಸ್ ಏಜೆನ್ಸಿಗಳ ಬಳಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿರುವುದಿಲ್ಲ ಹಾಗೂ ಸಿಲಿಂಡರ್ ವಿತರಿಸುವವರು ಮನೆಗೆ ಡೆಲಿವರಿ ಪಡೆಯುವ ವೇಳೆಯಲ್ಲಿ ಕೂಡ ಇ-ಕೆವೈಸಿ ಮಾಡಿಸಲು ಅವಕಾಶವಿರುತ್ತದೆ. ಅಲ್ಲದೇ ಹೆಲೋ ಬಿಪಿಸಿಎಲ್, ಇಂಡಿಯನ್ ಆಯಿಲ್ ಒನ್ ಮತ್ತು ವಿಟ್ರನ್ ಹೆಚ್‍ಪಿ ಗ್ಯಾಸ್ ಈ ಮೊಬೈಲ್ ಆಪ್‍ಗಳ ಮೂಲಕ ಇ-ಕೆವೈಸಿ ಮಾಡಿಸಬಹುದಾಗಿದೆ ಎಂದು ಆಹಾರ, ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.