ಎಲ್ಪಿಜಿ ಗ್ಯಾಸ್ ಗ್ರಾಹಕರಿಗೆ ಮಹತ್ವದ ಸುದ್ದಿಯೊಂದಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನ ಇಂಡೇನ್, ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಕಂಪನಿಯ ಪ್ರಕಾರ, ಯಾವುದೇ ಗ್ರಾಹಕರು ಆಧಾರ್ ಕಾರ್ಡ್ ತೋರಿಸಿ ಎಲ್ಪಿಜಿ ಸಂಪರ್ಕ ಪಡೆಯಬಹುದು. ಆಧಾರ್ ನೀಡಿದ್ರೆ ಬೇರೆ ಯಾವುದೇ ದಾಖಲೆಯ ಅಗತ್ಯವಿರುವುದಿಲ್ಲ.
ಕೆಲಸದ ಮೇಲೆ ಆಗಾಗ ನಗರ ಬದಲಿಸುವ ನೌಕರರಿಗೆ ಇದ್ರಿಂದ ನೆಮ್ಮದಿ ಸಿಕ್ಕಂತಾಗಿದೆ. ಸಾಮಾನ್ಯವಾಗಿ ಎಲ್ಪಿಜಿ ಸಂಪರ್ಕ ಪಡೆಯಲು ಕೆಲ ದಾಖಲೆ ನೀಡಬೇಕು. ಅದ್ರಲ್ಲಿ ವಿಳಾಸ ಪುರಾವೆ ನೀಡಬೇಕಾಗುತ್ತದೆ. ನಗರಗಳಲ್ಲಿ ಕೆಲಸ ಮಾಡುವ ವಲಸೆ ಕಾರ್ಮಿಕರ ಬಳಿ ವಿಳಾಸ ಪುರಾವೆ ಇರುವುದಿಲ್ಲ. ಇದ್ರಿಂದ ಎಲ್ಪಿಜಿ ಸಂಪರ್ಕ ಪಡೆಯುವುದು ಸಮಸ್ಯೆಯಾಗುತ್ತದೆ. ಆದ್ರೆ ಇಂಡೇನ್ ಈಗ ನೆಮ್ಮದಿ ನೀಡಿದೆ.
ಆಧಾರ್ ಕಾರ್ಡ್ ತೋರಿಸಿ ಯಾವುದೇ ವ್ಯಕ್ತಿ ಹೊಸ ಎಲ್ಪಿಜಿ ಸಂಪರ್ಕವನ್ನು ಪಡೆಯಬಹುದು. ಅವರಿಗೆ ಆರಂಭದಲ್ಲಿ ಸಬ್ಸಿಡಿ ರಹಿತ ಸಂಪರ್ಕ ನೀಡಲಾಗುವುದು. ಗ್ರಾಹಕರು ನಂತರ ವಿಳಾಸ ಪುರಾವೆಯನ್ನು ಸಲ್ಲಿಸಬಹುದು. ಈ ಪುರಾವೆ ಸಲ್ಲಿಸಿದ ತಕ್ಷಣ, ಸಿಲಿಂಡರ್ ಮೇಲಿನ ಸಬ್ಸಿಡಿಯ ಪ್ರಯೋಜನವನ್ನು ಸಹ ನೀಡಲಾಗುತ್ತದೆ ಎಂದು ಕಂಪನಿ ಮಾಹಿತಿ ನೀಡಿದೆ.
ಎಲ್ಪಿಜಿ ಸಂಪರ್ಕ ಪಡೆಯಲು ಮೊದಲು ಹತ್ತಿರದ ಗ್ಯಾಸ್ ಏಜೆನ್ಸಿಗೆ ಹೋಗಬೇಕು. ಅಲ್ಲಿ ಫಾರ್ಮ್ ಭರ್ತಿ ಮಾಡಬೇಕು. ಅದರಲ್ಲಿ ಆಧಾರ್ ವಿವರಗಳನ್ನು ನೀಡಬೇಕು. ಅರ್ಜಿಯೊಂದಿಗೆ ಆಧಾರ್ನ ಪ್ರತಿಯನ್ನು ನೀಡಬೇಕು, ಫಾರ್ಮ್ನಲ್ಲಿ ಮನೆಯ ವಿಳಾಸದ ಬಗ್ಗೆ ಸ್ವಯಂ ಘೋಷಣೆ ಇರಬೇಕು. ಎಲ್ಲಿ ವಾಸಿಸುತ್ತೀರಿ ಮತ್ತು ಮನೆಯ ಸಂಖ್ಯೆ ಏನು ಎಂಬುದನ್ನು ನಮೂದಿಸಬೇಕು. ತಕ್ಷಣ ನಿಮಗೆ ಎಲ್ಪಿಜಿ ಸಂಪರ್ಕ ಸಿಗುತ್ತದೆ. ಆದ್ರೆ ಎಲ್ಪಿಜಿಗೆ ಪೂರ್ಣ ಹಣ ಪಾವತಿ ಮಾಡಬೇಕಾಗುತ್ತದೆ. ವಿಳಾಸ ಪುರಾವೆ ನೀಡಿದ ನಂತ್ರ ಸಬ್ಸಿಡಿ ನಿಮಗೆ ಲಭ್ಯವಾಗುತ್ತದೆ.