ಬೆಲೆ ಏರಿಕೆ ಜನರನ್ನು ಕಂಗೆಡಿಸಿದೆ. ಶೀಘ್ರವೇ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡುವ ಸಾಧ್ಯತೆಯಿದೆ. ಗ್ರಾಹಕರು ಪ್ರತಿ ಸಿಲಿಂಡರ್‌ಗೆ 1,000 ರೂಪಾಯಿ ಪಾವತಿಸುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರ ಎಲ್ಪಿಜಿ ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ಸಂಪೂರ್ಣವಾಗಿ ತೆಗೆದುಹಾಕುವ ಸಾಧ್ಯತೆಯಿದೆ. ಆದರೆ, ಈ ಬಗ್ಗೆ ಸರಕಾರ ಯಾವುದೇ ಸ್ಪಷ್ಟ ಉತ್ತರ ನೀಡಿಲ್ಲ.
ಎಲ್‌ಪಿಜಿ ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡುವ ಕುರಿತು ಮೋದಿ ಸರ್ಕಾರ ಹಲವು ಬಾರಿ ಚರ್ಚಿಸಿದೆ. ವರದಿಗಳ ಪ್ರಕಾರ, ಸರ್ಕಾರಕ್ಕೆ 2 ಆಯ್ಕೆಗಳಿವೆ. ಮೊದಲನೆಯದಾಗಿ ಸಬ್ಸಿಡಿ ಇಲ್ಲದೆ ಸಿಲಿಂಡರ್‌ಗಳನ್ನು ಸರಬರಾಜು ಮಾಡುವುದು. ಎರಡನೇಯದು, ಕೆಲ ಗ್ರಾಹಕರಿಗೆ ಮಾತ್ರ ಸಬ್ಸಿಡಿ ಲಾಭ ನೀಡುವುದು. ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಬ್ಸಿಡಿಯ ಲಾಭ ಮುಂದುವರಿಯಲಿದೆ. ಉಳಿದವರಿಗೆ ಸಬ್ಸಿಡಿ ನೀಡುವ ಸಾಧ್ಯತೆ ಕಡಿಮೆಯಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸಲು 2016 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯನ್ನು ಪ್ರಾರಂಭಿಸಿದರು.
ಕೇಂದ್ರ ಸರ್ಕಾರ 2021 ರ ಆರ್ಥಿಕ ವರ್ಷದಲ್ಲಿ ಎಲ್‌ಪಿಜಿ ಸಬ್ಸಿಡಿಗಾಗಿ 3,559 ಕೋಟಿ ರೂಪಾಯಿ ಮೀಸಲಿಟ್ಟಿದೆ. 2020 ರ ಹಣಕಾಸು ವರ್ಷದಲ್ಲಿ, ಈ ವೆಚ್ಚವು 24,468 ಕೋಟಿ ರೂಪಾಯಿಯಾಗಿತ್ತು. ಈ ವೆಚ್ಚವನ್ನು ಡಿಬಿಟಿ ಯೋಜನೆಯಡಿ ಮಾಡಲಾಗಿದೆ. ಗ್ರಾಹಕರು ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಗಳಿಗೆ ಪೂರ್ಣ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಅದೇ ಸಮಯದಲ್ಲಿ, ಸಬ್ಸಿಡಿ ಹಣವನ್ನು ಸರ್ಕಾರದ ಪರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಮರುಪಾವತಿಸಲಾಗುತ್ತದೆ.