ಬುಧವಾರದಂದು ಎಲ್.ಪಿ.ಜಿ. ಸಿಲಿಂಡರ್ ಗಳ ದರ ಏರಿಕೆಯಾಗಿದ್ದು, ಬಡ ಮಧ್ಯಮ ವರ್ಗದವರ ಜೀವನ ಮತ್ತಷ್ಟು ದುಸ್ತರವಾಗುತ್ತಿದೆ. ಅಲ್ಲದೆ ಸಿಲಿಂಡರ್ ಬೆಲೆ ಏರಿಕೆ ಪರಿಣಾಮ ಹೋಟೆಲ್ ತಿನಿಸುಗಳ ದರವೂ ಹೆಚ್ಚಾಗಲಿದ್ದು, ಸಾಮಾನ್ಯ ಗ್ರಾಹಕರು ಇದರ ಬಿಸಿ ಎದುರಿಸಬೇಕಿದೆ.
ಪೆಟ್ರೋಲ್, ಡೀಸೆಲ್, ಸಿಲಿಂಡರ್ ಬೆಲೆಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆಗೆ ಅನುಗುಣವಾಗಿ ನಿಗದಿಯಾಗುತ್ತವೆ ಎಂದು ಭಾರತೀಯ ತೈಲ ಕಂಪನಿಗಳು ಹೇಳುತ್ತವಾದರೂ ಆದರೆ ವಾಸ್ತವದಲ್ಲಿ ಅದನ್ನು ಕಾರ್ಯರೂಪಕ್ಕೆ ತರುತ್ತಿಲ್ಲ.
2022ರ ಮಾರ್ಚ್ ನಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರೆಲ್ ಕಚ್ಚಾತೈಲದ ಬೆಲೆ ನೂರು ಡಾಲರ್ ಗಳಿದ್ದು, ಈಗ 77 ಡಾಲರ್ ತಲುಪಿದ್ದರೂ ಸಹ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಲಾಗಿದೆ. ಅಲ್ಲದೆ ಮೇಘಾಲಯ, ನಾಗಾಲ್ಯಾಂಡ್ ವಿಧಾನಸಭಾ ಚುನಾವಣಾ ಮತದಾನ ಮುಗಿದ ಮರುದಿನವೇ ಈ ತೀರ್ಮಾನ ಕೈಗೊಳ್ಳಲಾಗಿದೆ.
ಜೊತೆಗೆ ಗ್ರಾಹಕರಿಗೆ ಈ ಮೊದಲು ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಎಲ್.ಪಿ.ಜಿ. ಗ್ರಾಹಕರು ಈಗಲೂ ಸಹ ತಮ್ಮ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣ ಜಮಾ ಆಗುತ್ತಿದೆಯಾ ಎಂಬುದನ್ನು ಪರಿಶೀಲಿಸುತ್ತಿದ್ದರಾದರೂ ಯಾವುದೇ ಹಣ ಬರುತ್ತಿಲ್ಲ. ಕೇವಲ ಉಜ್ವಲಾ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್ ಗೆ ಇನ್ನೂರು ರೂಪಾಯಿಗಳ ಸಬ್ಸಿಡಿ ಸಿಗುತ್ತಿದ್ದು, ಈಗ ಸಿಲಿಂಡರ್ ಬೆಲೆ ಏರಿಕೆ ಬಿಸಿ ಅವರುಗಳಿಗೂ ತಟ್ಟಲಿದೆ.
ಯುಗಾದಿ ಸೇರಿದಂತೆ ಹಬ್ಬಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ಸಿಲಿಂಡರ್ ಬೆಲೆ ಏರಿಕೆ ಆಗಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.