
ಕೇಂದ್ರದ ನರೇಂದ್ರ ಮೋದಿ ಸರ್ಕಾರ ಅನೇಕ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಲೇ ಇದೆ. ಬಡವರಿಗೆ ಉಚಿತ ಪಡಿತರ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಮೂಲಕ ಬಡವರಿಗೆ ಎಲ್.ಪಿ.ಜಿ ಸಂಪರ್ಕ ಕಲ್ಪಿಸಲೆಂದೇ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಪ್ರಾರಂಭಿಸಲಾಗಿತ್ತು. 2016ರಲ್ಲೇ ಈ ಯೋಜನೆಗೆ ಚಾಲನೆ ಸಿಕ್ಕಿದೆ. ಗ್ರಾಮೀಣ ಮತ್ತು ಹಿಂದುಳಿದ ಮನೆಗಳಿಗೆ LPG ಯಂತಹ ಶುದ್ಧ ಅಡುಗೆ ಇಂಧನವನ್ನು ಒದಗಿಸಲಾಗ್ತಿದೆ.
ಸಾಂಪ್ರದಾಯಿಕ ಅಡುಗೆ ಇಂಧನಗಳಾದ ಉರುವಲು, ಕಲ್ಲಿದ್ದಲು, ಹಸುವಿನ ಸೆಗಣಿ ಕೇಕ್ ಇತ್ಯಾದಿಗಳ ಬಳಕೆಯು ಗ್ರಾಮೀಣ ಮಹಿಳೆಯರ ಆರೋಗ್ಯದ ಮೇಲೆ ಮತ್ತು ಪರಿಸರದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ. ಇದೇ ಕಾರಣಕ್ಕೆ ಬಡವರಿಗೂ ಎಲ್.ಪಿ.ಜಿ ಪೂರೈಸುವ ಯೋಜನೆ ಹಮ್ಮಿಕೊಳ್ಳಲಾಗಿತ್ತು. ಈ ಯೋಜನೆ ಅಡಿಯಲ್ಲಿ BPL ಕುಟುಂಬಗಳಿಗೆ LPG ಸಂಪರ್ಕಗಳನ್ನು ನೀಡಲಾಗುತ್ತದೆ. ಗ್ಯಾಸ್ ಸ್ಟೌವ್ ಖರೀದಿಸಲು ಮತ್ತು ಸಿಲಿಂಡರ್ ರೀಫಿಲ್ ಮಾಡಲು ಬಡ್ಡಿ ರಹಿತ ಸಾಲವನ್ನು ಸಹ ಕೊಡಲಾಗುತ್ತಿದೆ.
ಎಲ್.ಪಿ.ಜಿ ಸಂಪರ್ಕಕ್ಕೆ ತಗುಲುವ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಲಾಭ ಪಡೆಯಲು ಸರ್ಕಾರವು ಅನೇಕ ಅರ್ಹತೆಗಳನ್ನು ಸಹ ನಿಗದಿಪಡಿಸಿದೆ. ಫಲಾನುಭವಿಗಳು ಕನಿಷ್ಠ ವಿದ್ಯಾರ್ಹತೆ ಹೊಂದಿರಬೇಕು, ಭಾರತೀಯ ಪ್ರಜೆಯಾಗಿರಬೇಕು. 18 ವರ್ಷ ಮೇಲ್ಪಟ್ಟವರಾಗಿರಬೇಕು, LPG ಸಂಪರ್ಕವನ್ನು ಹೊಂದಿರದ, BPL ಕುಟುಂಬದ ಮಹಿಳೆಯಾಗಿರಬೇಕು. ಇದೇ ರೀತಿಯ ಇತರ ಯೋಜನೆಗಳ ಅಡಿಯಲ್ಲಿ ಯಾವುದೇ ಪ್ರಯೋಜನವನ್ನು ಪಡೆದಿರಬಾರದು.
ಎಸ್ಇಸಿಸಿ 2011 ಅಥವಾ ಎಸ್ಸಿ/ಎಸ್ಟಿ ಕುಟುಂಬಗಳ ಅಡಿಯಲ್ಲಿ ಬಿಪಿಎಲ್ ಕುಟುಂಬಗಳ ಪಟ್ಟಿಯಲ್ಲಿರುವ ಫಲಾನುಭವಿಗಳು, ಪಿಎಂಎವೈ (ಗ್ರಾಮೀಣ), ಎಎವೈ, ಅತ್ಯಂತ ಹಿಂದುಳಿದ ವರ್ಗಗಳು (ಎಂಬಿಸಿ), ಅರಣ್ಯವಾಸಿಗಳು, ನದಿ ದ್ವೀಪಗಳಲ್ಲಿ ವಾಸಿಸುವ ಜನರು, ಬುಡಕಟ್ಟು ಜನಾಂಗದವರು ಈ ಯೋಜನೆಗೆ ಅರ್ಹ ಫಲಾನುಭವಿಗಳಾಗಿರುತ್ತಾರೆ.