ಶಿವಮೊಗ್ಗ ಜಿಲ್ಲೆಯಾದ್ಯಂತ ಒಂದೆರಡು ದಿನಗಳಿಂದ ಹದವಾದ ಮಳೆಯಾಗಿದ್ದು, ರೈತರ ಮೊಗದಲ್ಲಿ ಸಂತಸ ತಂದಿದೆ. ಗುರುವಾರ ಸಂಜೆಯಿಂದ ಪ್ರಾರಂಭಗೊಂಡ ಮಳೆ ಶುಕ್ರವಾರ ಬೆಳಿಗ್ಗೆಯವರೆಗೂ ನಿರಂತರವಾಗಿ ಸುರಿದ ಪರಿಣಾಮ ಬಿರುಬಿಸಿಲಿನಿಂದ ಬಳಲಿದ್ದ ಇಳೆ ತಂಪಾಗಿದೆ.
ಮಳೆಯಿಲ್ಲದೆ ಜಿಲ್ಲೆಯಲ್ಲಿನ ಪ್ರಮುಖ ನದಿಗಳು, ಹಳ್ಳಕೊಳ್ಳ, ಕೆರೆಕಟ್ಟೆಗಳು ಸಂಪೂರ್ಣ ಬತ್ತಿ ಹೋಗಿದ್ದವು.
ಕೊಳವೆಬಾವಿಗಳಲ್ಲಿ ನೀರು ಇಲ್ಲದಂತಾಗಿತ್ತು. ಇದರಿಂದ ಜಿಲ್ಲೆಯ ಹಲವು ಭಾಗಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದ್ದರೆ, ಮತ್ತೊಂದೆಡೆ ಅಡಿಕೆ, ತೆಂಗಿನ ತೋಟಗಳನ್ನು ಉಳಿಸಿಕೊಳ್ಳಲು ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಇದೀಗ ಸುರಿದ ಮಳೆ ರೈತರಲ್ಲಿ ಸಂತಸ ತಂದಿದೆ. ಜನರು ನಿಟ್ಟುಸಿರು ಬಿಡುವಂತಾಗಿದೆ.
ಜಿಲ್ಲೆಯ ವಿವಿಧೆಡೆ ಎರಡು ದಿನಗಳಿಂದ ಹದವಾಗಿ ಮಳೆಯಾಗಿದ್ದು, ರೈತರಿಗೆ ತುಸು ನೆಮ್ಮದಿ ನೀಡಿದೆ. ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಲು ಅನುಕೂಲವಾಗಿದೆ. ಬಿತ್ತನೆಗೆ ಇನ್ನೂ ಹೆಚ್ಚಿನ ಮಳೆಯ ಅಗತ್ಯವಿದೆ. ಈ ವಾರದಲ್ಲಿ ಹದ ಮಳೆಯಾದರೆ ಬಿತ್ತನೆ ಆರಂಭಗೊಳ್ಳಲಿದೆ. ದನಕರುಗಳಿಗೆ ಬೇಕಾದ ಮೇವು ಬಿತ್ತನೆಗೂ ಅನುಕೂಲವಾಗುತ್ತದೆ.
ಕಳೆದ ಬಾರಿ ಮುಂಗಾರು ಕೈಕೊಟ್ಟ ಕಾರಣ ಕೃಷಿ ಚಟುವಟಿಕೆಗೆ ಸಾಕಷ್ಟು ಹಿನ್ನಡೆಯಾಗಿತ್ತು. ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದೆ ಕೆರೆಕಟ್ಟೆಗಳು ಒಣಗಿ ಹೋಗಿದ್ದವು. ಜಾನುವಾರುಗಳ ಮೇವಿಗೆ ಕೊರತೆ ಉಂಟಾಗಿತ್ತು. ಈ ಬಾರಿಯಾದರೂ ಉತ್ತಮ ಮಳೆಯಾಗುತ್ತದೆ ಎಂಬ ಆಶಾಭಾವನೆ ರೈತರದ್ದು.
ಜಿಲ್ಲೆಯಲ್ಲಿ ಕಳೆದ ಒಂದೆರಡು ದಿನಗಳಿಂದ ಅಲ್ಲಲ್ಲಿ ಮಳೆ ಆಗುತ್ತಿದೆ. ಇದರಿಂದ ಮುಂಗಾರು ಬಿತ್ತನೆಗೆ ಹೊಲವನ್ನು ಸಿದ್ಧಪಡಿಸಿಕೊಳ್ಳಲು ಇದರಿಂದ ಅನುಕೂಲವಾಗಿದೆ. ಆದರೆ ಕುಡಿಯುವ ನೀರು ಅಂತರ್ಜಲ ಹೆಚ್ಚಳಕ್ಕೆ ಅನುಕೂಲವಾಗಿಲ್ಲ. ಬಿಸಿಲ ಬೇಗೆಯಿಂದ ಬೇಸತ್ತಿದ್ದ ಜನರು ಮಳೆಯಿಂದ ತುಸು ನಿರಾಳವಾಗಿದ್ದಾರೆ.
ಕಳೆದ ಎರಡು ದಿನಗಳಿಂದ ಜಿಲ್ಲಾದ್ಯಂತ ಮಳೆಯ ವಾತಾವರಣ ಸೃಷ್ಟಿಯಾಗಿ ಗುಡುಗು, ಸಿಡಿಲು ಸಹಿತ ಅಲ್ಲಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು, ಬರದಿಂದ ಕಂಗೆಟ್ಟಿದ್ದ ರೈತರಲ್ಲಿ ಭರವಸೆ ಮೂಡಿದೆ. ಜತೆಗೆ ಬಿಸಿಲಿನ ಜಳಕ್ಕೆ ಕತ್ತರಿಸಿ ಹೋಗಿದ್ದ ಜನತೆ ಕೂಡ ನಿಟ್ಟುಸಿರು ಬಿಡುವಂತಾಗಿದೆ. ಜಿಲ್ಲೆಯಲ್ಲಿ ಈ ಬಾರಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿ ಹೋಗಿತ್ತು. ಇದೀಗ ಅಲ್ಲಲ್ಲಿ ಮಳೆ ಆಗುತ್ತಿರುವುದರಿಂದ ತಾಪಮಾನ ಕೊಂಚ ಇಳಿಕೆಯಾಗಿ 30 ಡಿಗ್ರಿ ದಾಖಲಾಗಿದೆ.
ತೀರ್ಥಹಳ್ಳಿ, ಹೊಸನಗರ, ಸಾಗರ, ರಿಪ್ಪನ್ ಪೇಟೆ ಸೇರಿದಂತೆ ಶಿವಮೊಗ್ಗ ಜಿಲ್ಲೆಯ ಹಲವೆಡೆ ಮಳೆ ಆಗಿರುವುದು ಅಡಕೆ ತೋಟಗಳಿಗೆ ಅನುಕೂಲ ಆಗಿದೆ. ಜಿಲ್ಲೆಯ ನಾನಾ ಕಡೆ ಸುರಿದ ಮಳೆ, ರೈತರಲ್ಲಿ ಒಂದಷ್ಟು ಭರವಸೆ ಮೂಡಿಸಿದ್ದು, ಮುಂಗಾರಿನ ಕನಸು ಗರಿಗೆದರಿದೆ. ಕೆಲವು ಕಡೆ ಮುಂಗಾರು ಉಳುಮೆ ಆರಂಭಕ್ಕೆ ಈ ಮಳೆ ಹಸಿರು ನಿಶಾನೆ ತೋರಿಸಿದೆ. ಮುಂದಿನ ಮುಂಗಾರು ಮಳೆಗಳತ್ತ ರೈತರು ಆಸೆಗಣ್ಣಿನಿಂದ ನೋಡುವಂತೆ ಮಾಡಿದೆ.