
ಭಾರತದ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಭೇಟಿಗಾಗಿ ಭೂತಾನ್ ತಲುಪಿದ್ದಾರೆ. ಭೂತಾನ್‌ನ ಪ್ರಧಾನಿ ತ್ಶೆರಿಂಗ್ ತೊಬ್ಗೇ, ಪ್ರಧಾನಿ ಮೋದಿ ಅವರನ್ನು ಸಹೋದರನೆಂದು ಬಣ್ಣಿಸಿದ್ದು ವಿಶೇಷ. ಭೂತಾನ್‌ನಲ್ಲಿ ಪ್ರಧಾನಿಯ ಹೊರತಾಗಿ ಒಬ್ಬ ರಾಜ ಕೂಡ ಇದ್ದಾರೆ. ಭೂತಾನ್‌ನ ರಾಜ ಇಡೀ ಜಗತ್ತಿನಲ್ಲೇ ಬಹಳ ಜನಪ್ರಿಯತೆ ಪಡೆದಿದ್ದಾರೆ.
ಭೂತಾನ್‌ನ ರಾಜನ ಹೆಸರು ಜಿಗ್ಮೆ ಖೇಸರ್ ನಮ್ಗೈಲ್ ವಾಂಗ್ಚುಕ್. ಅಲ್ಲಿನ ರಾಣಿ ಜೆಟ್ಸುನ್ ಪೆಮಾ ವಾಂಗ್ಚುಕ್. ಕೇವಲ 28 ವರ್ಷದ ಜಿಗ್ಮೆ ಖೇಸರ್ ನಮ್ಗ್ಯೆಲ್ ವಾಂಗ್‌ಚುಕ್ 2008 ರಲ್ಲಿ ತನ್ನ ತಂದೆಯ ಮರಣದ ನಂತರ ಸಿಂಹಾಸನ ಏರಿದ್ದರು. ಭೂತಾನ್‌ನ ಕಿರಿಯ ರಾಜ ಎನಿಸಿಕೊಂಡರು.
ಭೂತಾನ್ ರಾಜನ ವಿವಾಹವು ಎಷ್ಟು ಅದ್ಧೂರಿಯಾಗಿತ್ತೆಂದರೆ, ಇದು ಭೂತಾನ್‌ನಲ್ಲಿ ನಡೆದ ಅತ್ಯಂತ ದೊಡ್ಡ ಕಾರ್ಯಕ್ರಮ. ರಾಜ ಜಿಗ್ಮೆ ಖೇಸರ್, 21 ವರ್ಷದ ಜೆಟ್ಸನ್ ಪೆಮಾಳನ್ನು ವರಿಸಿದರು. ನಂತರ ಪೆಮಾ ಅವರ ಹೆಸರು ವಿಶ್ವದ ಕಿರಿಯ ರಾಣಿಯೆಂದು ದಾಖಲಾಯ್ತು. ಇವರಿಬ್ಬರ ಪ್ರೇಮಕಥೆ ಇನ್ನೂ ಅದ್ಭುತವಾಗಿದೆ.
ರಾಜಧಾನಿ ಥಿಂಪುವಿನಿಂದ 71 ಕಿಮೀ ದೂರದಲ್ಲಿರುವ ಐತಿಹಾಸಿಕ ಪಟ್ಟಣದಲ್ಲಿ ಬೌದ್ಧ ಸಂಪ್ರದಾಯದಂತೆ ಇವರ ವಿವಾಹ ನೆರವೇರಿದೆ. ರಾಣಿ, ರಾಜನಿಗಿಂತ ಹತ್ತು ವರ್ಷ ಚಿಕ್ಕವಳು. ಮದುವೆ ಸಮಾರಂಭದಲ್ಲಿಯೇ ವೆಂಗ್ಚುಕ್ ಪೆಮಾಳನ್ನು ರಾಣಿಯಾಗಿ ಪಟ್ಟಾಭಿಷೇಕ ಮಾಡಿದ್ದು ವಿಶೇಷ.
ಈ ದಂಪತಿಗೆ 2016 ರಲ್ಲಿ ಮೊದಲ ಮಗು ಜನಿಸಿದೆ. ಮಗುವಿನ ಹೆಸರು ಪ್ರಿನ್ಸ್ ಜಿಗ್ಮೆ ನಾಮ್ಗ್ಯೆಲ್ ವಾಂಗ್ಚುಕ್. ಎರಡನೇ ಮಗು ಪ್ರಿನ್ಸ್ ಜಿಗ್ಮೆ ಉಗ್ಯೆನ್ ವಾಂಗ್‌ಚುಕ್ 2020 ರಲ್ಲಿ ಜನಿಸಿದ. 2023 ರಲ್ಲಿ ರಾಜಮನೆತನಕ್ಕೆ ರಾಜಕುಮಾರಿಯ ಆಗಮನವಾಗಿದೆ. ಈ ದಂಪತಿಗೆ ಮಗಳು ಜನಿಸಿದಳು.
ಥಿಂಪುವಿನಲ್ಲಿ ಪಿಕ್ನಿಕ್ ಸಮಯದಲ್ಲಿ ಜಿಗ್ಮೆ ಖೇಸರ್, ಪೆಮಾರನ್ನು ಭೇಟಿಯಾದರು. ಆಗ ವಾಂಗ್ಚುಕ್ ಭೂತಾನ್ ರಾಜಕುಮಾರನಾಗಿದ್ದ, ಆತನಿಗೆ ಕೇವಲ 17 ವರ್ಷ. ಪೆಮಾ 7 ವರ್ಷದ ಬಾಲಕಿ. ಆಗಲೇ ಜಿಗ್ಮೆ ಖೇಸರ್‌ಗೆ ತನಗಿಂತ 10 ವರ್ಷ ಚಿಕ್ಕವಳಾದ ಪೆಮಾ ಮೇಲೆ ಪ್ರೇಮಾಂಕುರವಾಗಿತ್ತು. ರಾಜಕುಮಾರ ಜಿಗ್ಮೆ, ಬಾಲಕಿ ಮುಂದೆ ಮದುವೆ ಪ್ರಸ್ತಾಪ ಇಟ್ಟಿದ್ದ.
ಇಬ್ಬರೂ ಪ್ರಬುದ್ಧರಾದ ಬಳಿಕವೇ ಅವರ ವಿವಾಹ ನೆರವೇರಿದೆ. ಸದ್ಯ ಭೂತಾನ್ ಭೇಟಿಯಲ್ಲಿರೋ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ ಜಿಗ್ಮೆ ಮತ್ತವರ ಕುಟುಂಬದವರು ಕೂಡ ಸ್ವಾಗತಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಭೂತಾನ್‌ನ ಪುಟ್ಟ ರಾಜಕುಮಾರನಿಗೆ ಫಿಫಾ ಅಂಡರ್-17 ವಿಶ್ವಕಪ್ ಫುಟ್‌ಬಾಲ್ ಮತ್ತು ಚೆಸ್ ಸೆಟ್ ಅನ್ನು ಉಡುಗೊರೆಯಾಗಿ ನೀಡಿದ್ದು ವಿಶೇಷ.