ಕಲಬುರ್ಗಿ: ಗ್ರಾಮದ ಮುಖಂಡರು ಸೇರಿ ಪ್ರೇಮಿಗಳಿಗೆ ಮದುವೆ ಮಾಡಿಸಿದ ಘಟನೆ ಮಾದನಹಿಪ್ಪರಗಿ ಗ್ರಾಮದಲ್ಲಿ ನಡೆದಿದೆ.
ಭಾಗಣ್ಣ ಮತ್ತು ಅಶ್ವಿನಿ ಮದುವೆಯಾದ ಜೋಡಿಗಳಾಗಿದ್ದಾರೆ. ಸಾಮಾಜಿಕ ಜಾಲತಾಣ ಮೂಲಕ ಭಾಗಣ್ಣ ಮತ್ತು ಅಶ್ವಿನಿ ಪರಿಚಯವಾಗಿದ್ದು, ಇಬ್ಬರ ನಡುವೆ ಪ್ರೀತಿ ಬೆಳೆದಿದೆ. ಜಾತಿ ಬೇರೆಯಾಗಿದ್ದ ಕಾರಣ ಇವರ ಮದುವೆಗೆ ಪೋಷಕರು ಒಪ್ಪುವುದಿಲ್ಲ ಎನ್ನುವ ಆತಂಕದಿಂದ ಮನೆ ಬಿಟ್ಟು ಓಡಿ ಹೋಗಿ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಭಾಗಣ್ಣ ತಿಳಿಸಿದಂತೆ ಯುವತಿ ಬೆಂಗಳೂರಿಗೆ ಹೋಗಿದ್ದಾಳೆ. ವಿಷಯ ತಿಳಿದ ಪೋಷಕರು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದು, ಗ್ರಾಮಸ್ಥರು ಮಧ್ಯ ಪ್ರವೇಶಿಸಿ ದೂರು ಕೊಡಬೇಡಿ. ಚರ್ಚೆಯ ನಂತರ ನಿರ್ಧಾರ ಮಾಡೋಣ ಎಂದು ಹೇಳಿದ್ದಾರೆ.
ನಂತರ ಯುವಕನಿಗೆ ಕರೆ ಮಾಡಿ ಇಬ್ಬರೂ ಊರಿಗೆ ಬಂದರೆ ಮದುವೆ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ. ಗ್ರಾಮದ ಮುಖಂಡರ ಮಾತಿನಂತೆ ಭಾಗಣ್ಣ ಮತ್ತು ಅಶ್ವಿನಿ ಗ್ರಾಮಕ್ಕೆ ಬಂದಿದ್ದು, ಇಬ್ಬರ ಪೋಷಕರ ಮನವೊಲಿಸಿದ ಗ್ರಾಮದ ಮುಖಂಡರು ಸರಳವಾಗಿ ಪ್ರೇಮಿಗಳ ಮದುವೆ ಮಾಡಿದ್ದಾರೆ.