
ಹುಬ್ಬಳ್ಳಿ: ಹುಬ್ಬಳ್ಳಿ ನಗರದ ಪ್ರತಿಷ್ಠಿತ ಆಸ್ಪತ್ರೆಯಿಂದ ರೆಮ್ ಡೆಸಿವಿರ್ ಇಂಜೆಕ್ಷನ್ ಕಳವು ಮಾಡಿ ಮಾರಾಟ ಮಾಡುತ್ತಿದ್ದ ಪ್ರೇಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 2 ವಯಲ್ ರೆಮ್ ಡೆಸಿವಿರ್ ಇಂಜೆಕ್ಷನ್ ಜಪ್ತಿ ಮಾಡಲಾಗಿದೆ.
ಹುಬ್ಬಳ್ಳಿ ವೆಂಕಟೇಶ್ವರ ಬಡಾವಣೆಯ ಸಿದ್ದನಗೌಡ ಪಾಟೀಲ ಮತ್ತು ವಿನಾಯಕ ನಗರದ ರಿಯಾ ಬಂಧಿತ ಆರೋಪಿಗಳು ಎಂದು ಹೇಳಲಾಗಿದೆ. ಬೇರೆ ಬೇರೆ ಆಸ್ಪತ್ರೆಗಳಲ್ಲಿ ಇವರು ಕೆಲಸ ಮಾಡುತ್ತಿದ್ದರು. ಹುಬ್ಬಳ್ಳಿಯ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ನರ್ಸ್ ಆಗಿರುವ ರಿಯಾ ರೆಮ್ ಡೆಸಿವಿರ್ ಇಂಜೆಕ್ಷನ್ ಕಳವು ಮಾಡಿ ಮತ್ತೊಂದು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಪ್ರಿಯಕರನಿಗೆ ತಂದುಕೊಟ್ಟಿದ್ದಾಳೆ.
ಅದನ್ನು ಬೇರೆಯವರಿಗೆ ಮಾರಾಟ ಮಾಡಲು ಪ್ರಯತ್ನಿಸಿದ್ದು, ಈ ವೇಳೆ ಸಿಸಿಬಿ ಇನ್ಸ್ ಪೆಕ್ಟರ್ ಭರತ್ ರೆಡ್ಡಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.