ಬೆಂಗಳೂರು: ಇನ್ ಸ್ಟಾಗ್ರಾಂ ನಲ್ಲಿ ಪರಿಚಿಯನಾದ ಯುವಕನೊಬ್ಬ, ಯುವತಿಗೆ ಪ್ರೀತಿ-ಪ್ರೇಮದ ನಾಟಕವಾಡಿ ಎರಡುವರೆ ವರ್ಷ ಸುತ್ತಾಟ ನಡೆಸಿ ಮದುವೆಯಾಗುವುದಾಗಿ ನಂಬಿಸಿ, ಬಳಿಕ ಮದುವೆ ದಿನ ಮದುವೆ ಮಂಟಪಕ್ಕೆ ಹೋಗುವ ಮಾರ್ಗ ಮಧ್ಯೆಯೇ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳುರಿನ ನೆಲಗದರನಹಳ್ಳಿಯ ಗಜೇಂದ್ರ ಎಂಬ ಯುವಕ, ತುಮಕೂರಿನ ಚಿಕ್ಕನಾಯಕನಹಳ್ಳಿಯ ಯುವತಿಯನ್ನು ಇನ್ ಸ್ಟಾಗ್ರಾಂ ಮೂಲಕ ಪರಿಚಯಿಸಿಕೊಂಡಿದ್ದಾನೆ. ಇಬ್ಬರ ನಡುವೆ ಆರಂಭವಾದ ಪರಿಚಯ, ಸ್ನೇಹ, ಪ್ರೀತಿಗೆ ತಿರುಗುದೆ.
ಯುವತಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಎರಡುವರೆ ವರ್ಷಗಳ ಕಾಲ ಇಬ್ಬರು ಎಲ್ಲೆಂದರಲ್ಲಿ ಚನ್ನಾಗಿ ಸುತ್ತಾಡಿದ್ದಾರೆ. ಯುವತಿಯನ್ನು ಮದುವೆ ಆಗುವುದಾಗಿ ನಂಬಿಸಿದ್ದ ಗಜೇಂದ್ರ, ಆಕೆಯನ್ನು ಲಾಡ್ಜ್ ಗೆ ಕರೆದೊಯ್ದು ದೈಹಿಕವಾಗಿಯೂ ಬಳಸಿಕೊಂಡಿದ್ದನಂತೆ. ಬಳಿಕ ಮದುವೆ ವಿಷಯ ಪ್ರಸ್ತಾಪಿಸಿದರೆ ಮದುವೆಗೆ ಒಪ್ಪುತ್ತಿರಲಿಲ್ಲವಂತೆ ಇದರಿಂದ ನೊಂದ ಯುವತಿ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಳು.
ಗಜೇಂದ್ರನನ್ನು ಠಾಣೆಗೆ ಕರೆಸಿ ಮಹಿಳಾ ಪೊಲೀಸರು ಬುದ್ಧಿ ಹೇಳಿದ್ದರಂತೆ. ಅಲ್ಲದೆ ಯುವತಿಯನ್ನು ವಿವಾಹವಾಗುವಂತೆ ಸೂಚಿಸಿದ್ದರಂತೆ. ಠಾಣೆಯಲ್ಲಿ ಮದುವೆಗೆ ಗಜೇಂದ್ರ ಒಪ್ಪಿದ್ದ. ಹಾಗಾಗಿ ಮದುವೆಗಾಗಿ ಯುವತಿ ಹಾಗೂ ಮನೆಯವರು ಸಿದ್ಧತೆ ನಡೆಸಿದ್ದರು. ಬೆಂಗಳೂರಿನ ಪೀಣ್ಯದ ದುಗ್ಗಾಲಮ್ಮ ದೇವಾಲಯದಲ್ಲಿ ಮದುವೆಗೆ ತಯಾರಿ ನಡೆಸಲಾಗಿತ್ತು. ಮದುವೆ ದಿನ ದುಗ್ಗಾಲಮ್ಮ ದೇವಾಸ್ಥಾನಕ್ಕೆ ಕಾರಿನಲ್ಲಿ ಬರುತ್ತಿದ್ದ ವರ ಮಹಾಶಯ ಗಜೇಂದ್ರ ಮಾರ್ಗ ಮಧ್ಯೆಯೇ ಕಾರಿನಿಂದ ಇಳಿದು ಪರಾರಿಯಾಗಿದ್ದಾನೆ.
ಯುವತಿ ಮತ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಗಜೇಂದ್ರನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನ ಹುಡುಕಾಟ ನಡೆಸಿದ್ದಾರೆ.