ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಕಾರಣಕ್ಕೆ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿ ಹೂತು ಹಾಕಿದ್ದ ಘಟನೆ 7 ತಿಂಗಳ ನಂತರ ಮಗಳಿಂದಲೇ ಬಹಿರಂಗವಾಗಿದೆ.
ತಂದೆಯ ಉಸಿರುಗಟ್ಟಿಸಿ ಕೊಂದ ಅಮ್ಮನ ರಹಸ್ಯವನ್ನು ಮಗಳು ಬಹಿರಂಗಪಡಿಸಿದ್ದಾಳೆ. ಮೃತನ ಪತ್ನಿ ಹಾಗೂ ಪ್ರಿಯಕರನನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಂಜಯನಗರ ನಿವಾಸಿ ಆಂಜನೇಯ(45) ಕೊಲೆಯಾದ ವ್ಯಕ್ತಿ. ಆತನ ಪತ್ನಿ ಅನಿತಾ ಮತ್ತು ಪ್ರಿಯಕರ ರಾಕೇಶ್ ನನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಜನೇಯನ 14 ವರ್ಷದ ಮಗಳು ಇತ್ತೀಚೆಗೆ ಸಂಬಂಧಿಕರ ಬಳಿ ಈ ಮಾಹಿತಿ ತಿಳಿಸಿದ್ದು, ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ನಡೆಸಿದ ಪೊಲೀಸರು ವಿಚಾರಣೆ ನಡೆಸಿದಾಗ ಅನಿತಾ ಗಂಡನ ಕೊಲೆಯ ವಿಚಾರ ತಿಳಿಸಿದ್ದಾಳೆ.
ಕೊಲೆ ಪ್ರಕರಣದಲ್ಲಿ ಕರ್ತವ್ಯ ಲೋಪ ನಡೆದ ಆರೋಪದ ಹಿನ್ನೆಲೆಯಲ್ಲಿ ನಂದಿನಿ ಲೇಔಟ್ ಠಾಣೆಯಿಂದ ಜೆಸಿ ನಗರ ಠಾಣೆಗೆ ಪ್ರಕರಣವನ್ನು ಉತ್ತರ ವಿಭಾಗದ ಡಿಸಿಪಿ ವಿನಾಯಕ ವಸಂತರಾವ್ ಪಾಟೀಲ್ ವರ್ಗಾಯಿಸಿದ್ದಾರೆ.
ಅನಿತಾ ಮತ್ತು ಆಂಜನೇಯ ರಾಯಚೂರು ಜಿಲ್ಲೆಯವರಾಗಿದ್ದು, 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಗಾರ್ಮೆಂಟ್ಸ್ ನಲ್ಲಿ ಅನಿತಾ ಕೆಲಸ ಮಾಡುತ್ತಿದ್ದು, ಆಂಜನೇಯ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಮದ್ಯವ್ಯಸನಿಯಾಗಿದ್ದ ಆತ ಆಗಾಗ ಪತ್ನಿಯೊಂದಿಗೆ ಗಲಾಟೆ ಮಾಡುತ್ತಿದ್ದ.
5 ವರ್ಷಗಳ ಹಿಂದೆ ಅನಿತಾಗೆ ಕ್ಯಾಂಟೀನ್ ಕೆಲಸಗಾರ ರಾಕೇಶ್ ಪರಿಚಯವಾಗಿದ್ದು, ಅಕ್ರಮ ಸಂಬಂಧ ಬೆಳೆದಿದೆ. ಈ ವಿಚಾರ ತಿಳಿದ ಆಂಜನೇಯ ಪತ್ನಿಗೆ ಬೈದು ಎಚ್ಚರಿಕೆ ನೀಡಿದ್ದ. ಆದರೆ, ಆತನೊಂದಿಗೆ ಆಕ್ರಮ ಸಂಬಂಧ ಮುಂದುವರೆಸಿದ್ದಳು. ರಾಕೇಶ್ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಮಕ್ಕಳಿಗೂ ಆತನ ಪರಿಚಯವಿತ್ತು. ತಮ್ಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎನ್ನುವ ಕಾರಣಕ್ಕೆ ಜೂನ್ 14ರಂದು ಅನಾರೋಗ್ಯದಿಂದ ಮನೆಯಲ್ಲಿ ಮಲಗಿದ್ದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಅನಿತಾ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಳೆ. ವಿಪರೀತ ಮದ್ಯ ಸೇವನೆಯಿಂದ ಆರೋಗ್ಯ ಹದಗೆಟ್ಟು ಮೃತಪಟ್ಟಿರುವುದಾಗಿ ಹೇಳಿ ತರಾತುರಿಯಲ್ಲಿ ಗೊರಗುಂಟೆಪಾಳ್ಯ ಸಮೀಪದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಕೊಲೆಯ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದರೆ ನಿಮ್ಮನ್ನು ಕೂಡ ಕೊಲ್ಲುವುದಾಗಿ ಮಕ್ಕಳಿಗೆ ಅನಿತಾ ಬೆದರಿಕೆ ಹಾಕಿದ್ದಳು. ಗಂಡನ ಕೊಲೆ ಮಾಡಿದ ನಂತರ ಇಬ್ಬರು ಮಕ್ಕಳಿಗೆ ಹೊಡೆದು ಅನಿತಾ ಹಿಂಸಿಸುತ್ತಿದ್ದಳು. ಆಕೆಯ ಕಾಟ ಸಹಿಸದ ಮಕ್ಕಳು ಸಂಜಯನಗರದಲ್ಲಿದ್ದ ಅಜ್ಜಿ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದರು. ಅನಿತಾ ಹೆಗ್ಗನಹಳ್ಳಿಯಲ್ಲಿ ಪ್ರಿಯಕರನೊಂದಿಗೆ ನೆಲೆಸಿದ್ದಳು. ಮಕ್ಕಳನ್ನು ಸಂಬಂಧಿಕರು ಮೈಸೂರಿನ ಒಡನಾಡಿ ಸಂಸ್ಥೆಗೆ ಸೇರಿಸಿದ್ದು, ಅನಿತಾ ಪುತ್ರಿ ಸಂಬಂಧಿಕರ ಬಳಿ ತಂದೆಯ ಕೊಲೆ ವಿಚಾರ ತಿಳಿಸಿದ್ದಾಳೆ. ಆಗ ಸಂಘ-ಸಂಸ್ಥೆಯ ಪ್ರತಿನಿಧಿಗಳು ಮತ್ತು ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ.