ಬೆಂಗಳೂರು: ಮದುವೆಯಾಗಲು ನಿರಾಕರಿಸಿದ ಪ್ರೇಯಸಿಯ ಕತ್ತು ಸೀಳಿ ಕೊಂದ ಪ್ರೇಮಿ ಜಯನಗರ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.
ಸ್ಪಾದಲ್ಲಿ ಕೆಲಸ ಮಾಡುತ್ತಿರುವ ಪಶ್ಚಿಮ ಬಂಗಾಳ ಮೂಲದ ಫರಿದಾಖಾನಂ(42) ಕೊಲೆಯಾದ ಮಹಿಳೆ. ಕೊಲೆ ಆರೋಪಿ ಜಯನಗರ ನಿವಾಸಿ ಗಿರೀಶ್ ಅಲಿಯಾಸ್ ರಿಯಾನ್ ಖಾನ್(35) ಪೋಲಿಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಕೆಲವು ವರ್ಷಗಳ ಹಿಂದೆ ಕೊಲ್ಕತ್ತಾ ಮೂಲದ ಫರಿದಾಖಾನಂ ಪತಿ ಮೃತಪಟ್ಟಿದ್ದು, ಇಬ್ಬರು ಮಕ್ಕಳು ಇದ್ದಾರೆ. 2022ರಲ್ಲಿ ಕೊಲ್ಕತ್ತಾದಿಂದ ಬೆಂಗಳೂರಿಗೆ ಬಂದ ಅವರು ಜಯನಗರದ ಸ್ಪಾವೊಂದರಲ್ಲಿ ಕೆಲಸ ಮಾಡುತ್ತಿದ್ದರು. 2011ರಲ್ಲಿ ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ ಗಿರೀಶ್ ತನ್ನ ಹೆಸರನ್ನು ರಿಯಾನ್ ಖಾನ್ ಎಂದು ಬದಲಿಸಿಕೊಂಡು ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ.
ಹಿಂದೆ ಸ್ಪಾಗೆ ಬಂದಿದ್ದಾಗ ಇಬ್ಬರ ನಡುವೆ ಪರಿಚಯವಾಗಿ ಪ್ರೀತಿಸುತ್ತಿದ್ದರು. ಕೆಲಸದ ನಿಮಿತ್ತ ಮಾರ್ಚ್ 3ರಂದು ಕೊಲ್ಕತ್ತಾಗೆ ಹೋಗಿದ್ದ ಫರಿದಾಖಾನಂ ಮಾರ್ಚ್ 28 ರಂದು ಗಿರೀಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ವಾಪಸ್ ಆಗಿದ್ದರು. ಜೆಪಿ ನಗರದ ಓಯೋ ರೂಮ್ ಬಾಡಿಗೆ ಪಡೆದು ಇಬ್ಬರೂ ತಂಗಿದ್ದರು. ಈ ವೇಳೆ ಆರೋಪಿ ಕೆಲಸ ಬಿಟ್ಟು ಮದುವೆಯಾಗುವಂತೆ ಒತ್ತಾಯಿಸಿದ್ದಾನೆ. ಆಕೆ ನಿರಾಕರಿಸಿದಾಗ ಕೋಪಗೊಂಡು ಹೊರಗೆ ಹೋಗಿದ್ದಾನೆ. ಸಂಜೆ 7 ಗಂಟೆ ಸುಮಾರಿಗೆ ಫರಿದಾಳನ್ನು ಜಯನಗರದ ಶಾಲಿನಿ ಪಾರ್ಕ್ ಗೆ ಕರೆದುಕೊಂಡು ಹೋಗಿ ಮದುವೆಯಾಗಲು ಕೇಳಿದ್ದಾನೆ. ಕೆಲಸ ಬಿಟ್ಟು ಮದುವೆಯಾಗಲು ನಿರಾಕರಿಸಿದಾಗ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ನಂತರ ಚಾಕು ಸಮೇತ ಠಾಣೆಗೆ ಹೋಗಿ ಶರಣಾಗಿದ್ದಾನೆ ಎನ್ನಲಾಗಿದೆ.