ಶಿವಮೊಗ್ಗ: ಮದುವೆಯಾಗುವಂತೆ ಕೇಳಿದ್ದಕ್ಕೆ ಪ್ರೇಯಸಿಯ ಕತ್ತು ಹಿಸುಕಿ ಕೊಲೆ ಮಾಡಿ ಮೃತ ದೇಹವನ್ನು ಹೂತು ಹಾಕಿದ ಪ್ರಕರಣವನ್ನು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಠಾಣೆ ಪೊಲೀಸರು ಬಯಲಿಗೆಳೆದಿದ್ದಾರೆ.
ಕೊಪ್ಪ ತಾಲೂಕಿನ ಗುಣವಂತೆಯ ನರ್ಸಿಂಗ್ ವಿದ್ಯಾರ್ಥಿನಿ ಸೌಮ್ಯಾ(27) ಕೊಲೆಯಾದ ಯುವತಿ. ಸಾಗರ ತಾಲೂಕು ತಾಳಗುಪ್ಪದ ಸೃಜನ್ ಕೊಲೆ ಆರೋಪಿಯಾಗಿದ್ದಾನೆ. ಆನಂದಪುರ ಸಮೀಪದ ಮುಂಬಾಳು ಗ್ರಾಮದ ರೈಲ್ವೆ ಹಳಿ ಪಕ್ಕ ಶವ ಹೂತು ಹಾಕಿದ್ದ ಪ್ರಕರಣವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.
ತೀರ್ಥಹಳ್ಳಿಯ ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸೃಜನ್ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಸೌಮ್ಯಾ ಅವರನ್ನು ಪ್ರೀತಿಸಿದ್ದ. ಯುವತಿಯ ತಾಯಿ ಫೈನಾನ್ಸ್ ನಲ್ಲಿ ಸಾಲ ಪಡೆದಿದ್ದರಿಂದ ಸಾಲ ವಸೂಲಿಗೆ ತೆರಳಿದ್ದ ಈತನಿಗೆ ಸೌಮ್ಯಾ ಪರಿಚಯವಾಗಿದ್ದು, ನಂತರ ಇಬ್ಬರೂ ಪರಸ್ಪರ ಪ್ರೀತಿಸಿದ್ದಾರೆ. ಪ್ರೀತಿಯ ವಿಷಯವನ್ನು ತನ್ನ ತಾಯಿಗೂ ತಿಳಿಸಿದ್ದ ಸೌಮ್ಯಾ ಮದುವೆಗೆ ಒಪ್ಪಿಗೆ ಪಡೆದುಕೊಂಡಿದ್ದಾಳೆ. ಮದುವೆಯಾಗುವಂತೆ ಸೃಜನ್ ಗೆ ಕೇಳಿಕೊಂಡಿದ್ದಾಳೆ.
ಪರಿಶಿಷ್ಟ ಜಾತಿಗೆ ಸೇರಿದ ಕಾರಣ ಮದುವೆಗೆ ಮನೆಯಲ್ಲಿ ಪೋಷಕರು ಒಪ್ಪುವುದಿಲ್ಲ ಎಂದು ಸೃಜನ್ ಹೇಳಿದ್ದಾನೆ. ಇದರಿಂದ ಮನನೊಂದ ಸೌಮ್ಯಾ ಕಳೆದ ವರ್ಷ ಆತ್ಮಹತ್ಯೆಗೆ ಯತ್ನಿಸಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ವರ್ಷದ ನಂತರ ಮದುವೆಯಾಗುವುದಾಗಿ ಸೌಮ್ಯಾ ಪೋಷಕರಿಗೆ ಸೃಜನ್ ಭರವಸೆ ನೀಡಿದ್ದ ಎನ್ನಲಾಗಿದೆ.
ಜುಲೈ 2ರಂದು ಹೆದ್ದಾರಿಪುರ ಬಳಿ ಸೌಮ್ಯಾ ಮತ್ತು ಸೃಜನ್ ಭೇಟಿಯಾಗಿದ್ದು, ಮದುವೆ ವಿಚಾರದ ಬಗ್ಗೆ ಇಬ್ಬರ ನಡುವೆ ಜಗಳವಾಗಿದೆ. ಆಕೆಯ ಮೇಲೆ ಹಲ್ಲೆ ನಡೆಸಿದ ಆರೋಪಿ ಕತ್ತು ಹಿಸುಕಿ ಕೊಲೆ ಮಾಡಿ ಕಾರ್ ನಲ್ಲಿ ಶವ ತಂದು ಮುಂಬಾಳು ಸಮೀಪ ರೈಲ್ವೆ ಹಳಿ ಪಕ್ಕ ಚರಂಡಿ ನಿರ್ಮಿಸಲು ತೋಡಿದ್ದ ತಗ್ಗಿನಲ್ಲಿ ಹಾಕಿ ಮುಚ್ಚಿದ್ದಾನೆ. ಸೌಮ್ಯಾ ಕಾಣೆಯಾದ ಬಗ್ಗೆ ಜುಲೈ 3ರಂದು ಅವರ ಮನೆಯವರು ಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸೌಮ್ಯಾ ಮೊಬೈಲ್ ಫೋನ್ ಸಿಡಿಆರ್ ಪರಿಶೀಲಿಸಿದ ಪೊಲೀಸರು ಸೃಜನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ.