ಕಲಬುರ್ಗಿ: ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಪತಿಯನ್ನು ಕೊಲೆಗೈದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
34 ವರ್ಷದ ಗುರಪ್ಪ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮದ ಗುರಪ್ಪ ಮೇ 14ರಂದು ಮನೆಯಿಂದ ಹೊರಗೆ ಹೋದವ ನಾಪತ್ತೆಯಾಗಿದ್ದು, ಮೇ 15ರಂದು ಅಫಜಲಪುರ ತಾಲೂಕಿನ ಕೇಶವಾಪುರ ಸಮೀಪ ಮೃತದೇಹ ದೊರೆತಿತ್ತು. ಆತನನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಕಬ್ಬಿನ ಹೊಲದಲ್ಲಿ ಎಸೆಯಲಾಗಿತ್ತು.
ಮೃತದೇಹದ ಗುರುತು ಸಿಗದ ಕಾರಣ ಅನಾಮಧೆಯ ಶವ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಂದೂವರೆ ತಿಂಗಳ ನಂತರ ಶನಿವಾರ ಗುರಪ್ಪನ ಮೃತ ದೇಹವನ್ನು ಕುಟುಂಬದವರು ಗುರುತಿಸಿದ್ದಾರೆ. ಕೊಲೆಯಾದ ಗುರಪ್ಪನ ಪತ್ನಿ ಮಹಾದೇವಿ, ಸಂತೋಷ, ಸತೀಶ್ ಎಂಬುವರ ವಿರುದ್ಧ ಮೃತನ ತಂದೆ ದೂರು ನೀಡಿದ್ದಾರೆ.
ಗಂಡ ನಾಪತ್ತೆಯಾಗಿದ್ದರೂ ಪತ್ನಿ ದೂರು ಕೊಟ್ಟಿರಲಿಲ್ಲ. ಇತ್ತ ಮೃತನ ತಂದೆ ದೂರು ನೀಡುತ್ತಿದ್ದಂತೆ ಅಫಜಲಾಪುರ ಠಾಣೆ ಪೋಲೀಸರು ಮಹಾದೇವಿಯನ್ನು ಠಾಣೆಗೆ ಕರೆತಂದು ವಿಚಾರಣೆ ಒಳಪಡಿಸಿದಾಗ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಒಂದು ವರ್ಷದಿಂದ ಸಂತೋಷನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ ಮಹಾದೇವಿ ಗಂಡ ಅಡ್ಡಿಯಾಗುತ್ತಾನೆ ಎಂದು ತಿಳಿದು ಕೊಲೆ ಮಾಡಿದ್ದಾಳೆ. ಪತಿ ನಾಪತ್ತೆಯಾಗಿ ಒಂದೂವರೆ ತಿಂಗಳೇ ಕಳೆದರೂ ಕೂಡ ಗಂಡನ ಬಗ್ಗೆ ಬಾಯಿಬಿಟ್ಟಿರಲಿಲ್ಲ ಎಂದು ಹೇಳಲಾಗಿದೆ.