ಹಾಸನ: ಮದುವೆಯಾಗುವಂತೆ ಪೀಡಿಸಿದ ಮಹಿಳೆಯನ್ನು ಪ್ರಿಯಕರ ಕೊಲೆ ಮಾಡಿ ಕಬ್ಬಿನ ಗದ್ದೆಯಲ್ಲಿ ಹೂತು ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ. ಹೊಳೆನರಸೀಪುರ ಠಾಣೆ ಪೊಲೀಸರು ಪ್ರಕರಣ ಭೇದಿಸಿದ್ದಾರೆ.
ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ನೇತೃತ್ವದಲ್ಲಿ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅರಕಲಗೂಡು ತಾಲೂಕಿನ ಮುದ್ದಲಾಪುರದ ಬಿಬಿಎಂ ಪದವಿಧರೆ ಕಾವ್ಯಾ(29) ಕೊಲೆಯಾದ ಮಹಿಳೆ. ಪರಸನಹಳ್ಳಿಯ ಅವಿನಾಶ್ ಕೊಲೆ ಆರೋಪಿಯಾಗಿದ್ದು, ಆತನನ್ನು ಬಂಧಿಸಲಾಗಿದೆ.
ಕಾವ್ಯಾಗೆ ಈ ಮೊದಲು ಅಕ್ಷಯ್ ಎಂಬುವನ ಜೊತೆ ಮೊದಲನೇ ಮದುವೆಯಾಗಿ ವಿಚ್ಛೇದನ ಪಡೆದಿದ್ದರು. ಅವಿವಾಹಿತನಾಗಿದ್ದ ಅವಿನಾಶ್ ನನ್ನು ಪ್ರೀತಿಸುತ್ತಿದ್ದ ಕಾವ್ಯಾ ಮದುವೆಯಾಗದಿದ್ದರೂ ಒಟ್ಟಿಗೆ ವಾಸವಾಗಿದ್ದು, ಆತನ ಜೊತೆಗಿದ್ದಾಗ ಪಿಜಿಯಲ್ಲಿ ಇರುವುದಾಗಿ ಪೋಷಕರಿಗೆ ಹೇಳಿದ್ದರು.
ಕಾವ್ಯಾ ಪೋಷಕರಿಗೆ ನವೆಂಬರ್ 25 ರಿಂದ ಕರೆ ಮಾಡಿರಲಿಲ್ಲ. ಅನುಮಾನಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ 15 ದಿನದ ಹಿಂದೆ ಕೊಲೆ ಮಾಡಿ ಕಬ್ಬಿನ ಗದ್ದೆಯಲ್ಲಿ ಮೃತದೇಹ ಹೂತು ಹಾಕಿರುವುದಾಗಿ ಆರೋಪಿ ತಿಳಿಸಿದ್ದಾನೆ.
ತಹಶೀಲ್ದಾರ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಪ್ರದೀಪ್, ನಗರ ಠಾಣೆ ಎಸ್ಐ ಅರುಣ್ ಕುಮಾರ್ ಮೃತದೇಹ ಹೊರಗೆ ತೆಗೆಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.