ಚೆನ್ನೈ: ಪ್ರೀತಿಯೆಂದರೆ ಹಾಗೆನೇ. ಎಲ್ಲಿ, ಯಾವಾಗ, ಯಾರ ಜತೆಯಾದರೂ ಆಗಿಬಿಡಬಹುದು. ಆದರೆ ಎಲ್ಲರಿಗೂ ಪ್ರೀತಿಸಿದವರ ಜತೆ ಮದುವೆಯಾಗುವುದು ಸಾಧ್ಯವಾಗುವುದಿಲ್ಲ. ಆದರೆ ಇಲ್ಲೊಂದು ಅಪರೂಪದ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಭಾರಿ ಸುದ್ದಿಯಾಗಿದೆ. ಇದಕ್ಕೆ ಕಾರಣ ಈ ಜೋಡಿ ಮಾನಸಿಕ ಆರೋಗ್ಯ ಸಂಸ್ಥೆಯಲ್ಲಿ (ಐಎಂಎಚ್) ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ಮದುವೆಯಾಗಿದ್ದಾರೆ.
200 ವರ್ಷಗಳಷ್ಟು ಹಳೆಯದಾದ ಈ ಸಂಸ್ಥೆಯ ಇತಿಹಾಸದಲ್ಲಿ ಹೀಗೆ ಸಂಸ್ಥೆಯೊಳಕ್ಕೇ ಪ್ರೀತಿ ಹುಟ್ಟಿ ಮದುವೆಯಾಗಿರುವುದು ಇದೇ ಮೊದಲು ಎನ್ನಲಾಗಿದೆ. ಚೆನ್ನೈನ 42 ವರ್ಷದ ಮಹೇಂದ್ರನ್ ಮತ್ತು ವೆಲ್ಲೂರಿನ 36 ವರ್ಷದ ದೀಪಾ ಅವರು ಎರಡು ವರ್ಷಗಳ ಹಿಂದೆ ಚೆನ್ನೈ ಐಎಂಎಚ್‌ನಲ್ಲಿ ಮಾನಸಿಕ ಆರೋಗ್ಯ ಚಿಕಿತ್ಸೆ ಪಡೆದಿದ್ದರು, ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು, ನಂತರ ಅವರ ಮದುವೆ ಮಾಡಿಸಲಾಗಿದೆ.
ಕುಟುಂಬದಲ್ಲಿ ಆಗಿದ್ದ ಜಗಳದಿಂದ ಮಹೇಂದ್ರ ಅವರು ಖಿನ್ನತೆಗೆ ಜಾರಿ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ತಂದೆಯ ಸಾವಿನ ನಂತರ ಅದನ್ನು ಎದುರಿಸಲು ಸಾಧ್ಯವಾಗದೇ ದೀಪಾ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಈ ಸಂಸ್ಥೆಯಲ್ಲಿ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿತ್ತು. ಅಲ್ಲಿಯೇ ಅವರಿಗೆ ಪ್ರೇಮಾಂಕುರವಾಗಿ ಈಗ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.