
ಚಾಮರಾಜನಗರ: ಮಹಿಳೆಯೊಬ್ಬರನ್ನು ಪ್ರೀತಿ-ಪ್ರೇಮದ ಹೆಸರಲ್ಲಿ ನಂಬಿಸಿ ಲೈಂಗಿಕ ಸಂಬಂಧ ಬೆಳೆಸಿ ಮೂರು ಬಾರಿ ಅಬಾರ್ಷನ್ ಮಾಡಿಸಿ ಯುವಕನೊಬ್ಬ ಕೈಕೊಟ್ಟಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಕೊಳ್ಳೆಗಾಲ ಮೂಲದ ಕ್ಲಿಂಟನ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ರಾಮಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ನರ್ಸಿಂಗ್ ಕೋರ್ಸ್ ಓದುತ್ತಿದ್ದ ವೇಳೆ ಯುವತಿಗೆ ಕ್ಲಿಂಟನ್ ಎಂಬಾತನ ಪರಿಚಯವಾಗಿ ಇಬ್ಬರ ನಡುವೆ ಸ್ನೇಹವಿತ್ತು. ಕಾಲಕ್ರಮೇಣ ಇಬ್ಬರು ಪ್ರೀತಿಸುತ್ತಿದ್ದರು. ಯುವತಿಯ ಮನೆಯವರು ಕ್ಲಿಂಟನ್ ಮನೆಯವರಿಗೆ ವಿಚಾರ ತಿಳಿಸಿದ್ದರು. ಆದರೆ ಕ್ಲಿಂಟನ್ ಕುಟುಂಬದವರು ಮದುವೆಗೆ ಒಪ್ಪಿರಲಿಲ್ಲ.
ಬಳಿಕ 2022ರಲ್ಲಿ ಯುವತಿಗೆ ತಮಿಳುನಾಡು ಮೂಲದ ಸ್ಟೀಫನ್ ರಾಜ್ ಎಂಬಾತನ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಚನ್ನಾಗಿದ್ದ ಸಂಸಾರದ ನಡುವೆ ಮಾಜಿ ಪ್ರಿಯಕರ ಕ್ಲಿಂಟನ್ ಮತ್ತೆ ಎಂಟ್ರಿಯಾಗಿದ್ದ. ತನ್ನ ಬಳಿ ಇದ್ದ ಹಳೇ ಫೋಟೋಗಳ ಮೂಲಕ ಬ್ಲ್ಯಾಕ್ ಮೇಲ್ ಮಾಡತೊಡಗಿದ್ದ. ಆಕೆಯ ಪತಿಗೂ ಫೋಟೋ ಕಳಿಹಿಸಿ, ನಿನ್ನ ಪತ್ನಿ ತನ್ನ ಮಾಜಿ ಪ್ರಿಯತಮೆ ಈಗಲೂ ಸಂಪರ್ಕದಲ್ಲಿದ್ದೇವೆ ಎಂದು ಪತಿ-ಪತ್ನಿ ನಡುವೆ ಬೆಂಕಿ ಹಚ್ಚಿದ್ದ. ಇದರಿಂದ ಕೋಪಗೊಂಡ ಸ್ಟೀಫನ್ ರಾಜ್ ಪತ್ನಿಯಿಂದ ದೂರವಾಗಿದ್ದ. ಪ್ರಿಯತಮೆಗೆ ಪತಿಯಿಂದ ವಿಚ್ಛೇದನ ಪಡೆಯುವಂತೆ ಬ್ಲ್ಯಾಕ್ ಮೇಲ್ ಮಾಡಿ ಬೆದರಿಸುತ್ತಿದ್ದ.
ಪತಿಯಿಂದ ದೂರಾಗಿ ವಿಚ್ಛೇದನ ಪಡೆದ ಮಹಿಳೆ ಕ್ಲಿಂಟನ್ ಜೊತೆ ಇದ್ದಳು. ಹತ್ತು ತಿಂಗಳ ಕಾಲ ಒಟ್ಟಾಗೇ ಕಾಲ ಕಳೆದಿದ್ದರು. ಈ ನಡುವೆ ಕ್ಲಿಂಟನ್ ಮೂರು ಬಾರಿ ಆಕೆಗೆ ಅಬಾರ್ಷನ್ ಮಾಡಿಸಿದ್ದ. ಮದುವೆಯಾಗಲೇಬೇಕು ಎಂದು ಮಹಿಳೆ ಹಠ ಹಿಡಿಯುತ್ತಿದ್ದಂತೆ ಫೆ.12ರಂದು ಕೊಳ್ಳೇಗಾಲ ರಿಜಿಸ್ಟರ್ ಆಫೀಸ್ ನಲ್ಲಿ ರಿಜಿಸ್ಟರ್ ಮ್ಯಾರೇಜ್ ಗೆ ಡೇಟ್ ಫಿಕ್ಸ್ ಮಾಡಲಾಗಿತ್ತು. ಮದುವೆ ನೋಂದಣಿಗೆ ಬರಬೇಕಿದ್ದ ಪ್ರಿಯತಮ ಕ್ಲಿಂಟನ್ ಫೋನ್ ಸ್ವಿಚ್ಡ್ ಆಫ್ ಮಾಡಿ ಪರಾರಿಯಾಗಿದ್ದಾನೆ.
ನೊಂದ ಸಂತ್ರಸ್ತೆ ರಾಮಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.