ಬೆಂಗಳೂರು: ಫೋಟೋಗ್ರಾಫರ್ ಓರ್ವ ಯುವತಿಯನ್ನು ನಂಬಿಸಿ, ಕೈಕೊಟ್ಟ ಘಟನೆ ನಡೆದಿದ್ದು, ಯುವಕನಿಂದ ಮೋಸ ಹೋದ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ನಡೆದಿದೆ.
ನೆಲಮಂಗಲದಲ್ಲಿ ಫೋಟೋ ಸ್ಟುಡಿಯೋ ಇಟ್ಟುಕೊಂಡಿದ್ದ ಮಧು ಎಂಬಾತ, ಮನೆ ಕಾರ್ಯಕ್ರಮಕ್ಕೆ ಫೋಟೋ ತೆಗೆಯಲು ಹೋದಾಗ ಯುವತಿಗೆ ಪರಿಚಯವಾಗಿದ್ದ. ಹೀಗೆ ಆರಂಭವಾದ ಪರಿಚಯ, ಸ್ನೇಹ-ಪ್ರೇಮಕ್ಕೆ ತಿರುಗಿದೆ. ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ಸುತ್ತಾಟ ನಡೆಸಿದ್ದ ಮಧು, ಹೋಟೆಲ್, ಲಾಡ್ಜ್ ಗೆಂದು ಕರೆದೊಯ್ದು ಬಲವಂತದಿಂದ ದೈಹಿಕ ಸಂಬಂಧವನ್ನು ಬೆಳೆಸಿದ್ದ ಎಂಬ ಆರೋಪ ಕೇಳಿಬಂದಿದೆ.
ಯುವತಿ ಮದುವೆಯಾಗುವಂತೆ ಒತ್ತಡ ಹಾಕುತ್ತಿದ್ದಂತೆ ತನ್ನ ಅಸಲಿ ಮುಖ ತೋರಿಸಿದ ಯುವಕ ಮಧು, ತನ್ನ ಮನೆಯಲ್ಲಿ ಒಪ್ಪುತ್ತಿಲ್ಲ. ಬೇರೆದೊಂದು ಯುವತಿಯೊಂದಿಗೆ ಅದಾಗಲೇ ಮದುವೆ ಫಿಕ್ಸ್ ಆಗಿದೆ ಎಂದು ಎಸ್ಕೇಪ್ ಆಗಿದ್ದಾನೆ. ಇದರಿಂದ ಮನನೊಂದ ಯುವತಿ ಯುವಕನ ಮನೆಯವರಿಗೂ ವಿಷಯ ತಿಳಿಸಿದ್ದಾಳೆ. ಮಧು ಹಾಗೂ ಆತನ ಕುಟುಂಬದವರು ಯುವತಿಗೆ ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಆರೋಪಿ ಮಧು ಮನೆಯಬಳಿ ಬಂದರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾನಂತೆ. ಮೈಸೂರಿನ ಯುವತಿಯೊಂದಿಗೆ ವಿವಾಹವಾಗುತ್ತಿದ್ದೇನೆ ಏನು ಮಾಡುತ್ತೀಯೋ ಮಾಡು ಎಂದು ಆವಾಜ್ ಹಾಕಿದ್ದಾನಂತೆ. ಫೋಟೋಗ್ರಾಫರ್ ನಿಂದ ಮೋಸಹೋದ ಯುವತಿ ಮಹಿಳಾ ಆಯೋಗದ ಮೂಲಕ ನೆಲಮಂಗಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸದ್ಯ ಆರೋಪಿ ಮಧುನನ್ನು ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ.