ಹಾವೇರಿ: ಪ್ರೀತಿಸಿ ಮದುವೆಯಾಗಿದ್ದ ಜೋಡಿಯನ್ನು ಯುವತಿಯ ಮನೆಯವರು ಬೇರೆ ಮಾಡಿದ ಆರೋಪ ಕೇಳಿಬಂದಿದೆ. ಇದಕ್ಕೆ ಪೊಲೀಸರು ಸಾಥ್ ನೀಡಿದ್ದಾರೆ ಎಂದು ಯುವಕ ಆರೋಪಿಸಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ವೀರೇಶ್ ಎರಡು ವರ್ಷಗಳಿಂದ ಬಿಎಸ್ಸಿ ವಿದ್ಯಾರ್ಥಿನಿಯನ್ನು ಪ್ರೀತಿಸಿದ್ದು, ಕಳೆದ ವರ್ಷ ತಮ್ಮ ಮನೆಯವರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಮಾರ್ಚ್ 10 ರಂದು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ನೋಂದಣಿ ಮಾಡಿಸಲಾಗಿದೆ. ಮಾರ್ಚ್ 27 ರಂದು ಹರಪನಹಳ್ಳಿ ತಾಲೂಕಿನ ಕೊಟ್ಟೂರು ದೇವಾಲಯಕ್ಕೆ ಹೋಗಿದ್ದಾರೆ. ದೇವರ ದರ್ಶನದ ನಂತರ ಬೆಣ್ಣೆಹಳ್ಳಿಯ ವೀರೇಶ್ ಸಂಬಂಧಿಕರ ಮನೆಯಲ್ಲಿ ತಂಗಿದ್ದಾರೆ.
ಆಗ ಪೊಲೀಸರೆಂದು ಹೇಳಿಕೊಂಡ ಇನ್ನೋವಾ ಕಾರಿನಲ್ಲಿ ಬಂದಿದ್ದ ನಾಲ್ವರು ವಿಚಾರಣೆಗೆ ಬನ್ನಿ ಎಂದು ಪತ್ನಿಯನ್ನು ಕರೆದುಕೊಂಡು ಹೋಗಿದ್ದಾರೆ. ದೌರ್ಜನ್ಯದಿಂದ ತಮ್ಮ ಪತ್ನಿಯನ್ನು ಕಾರು ಹತ್ತಿಸಿಕೊಂಡು ಹೋಗಿದ್ದು ತಮ್ಮ ದಾರಿ ತಪ್ಪಿಸಿದ್ದಾರೆ ಎಂದು ವೀರೇಶ್ ರಾಣೆಬೆನ್ನೂರು ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಮದುವೆಗೆ ವಿರೋಧ ವ್ಯಕ್ತಪಡಿಸಿದ್ದ ಆಕೆಯ ಮನೆಯವರು ಪೊಲೀಸರೊಂದಿಗೆ ಸೇರಿ ಈ ರೀತಿ ಮಾಡಿರುವ ಸಾಧ್ಯತೆ ಇದೆ ಎನ್ನುವ ಆರೋಪ ಕೇಳಿಬಂದಿದೆ. ಗರ್ಭಿಣಿಯಾಗಿರುವ ಪತ್ನಿಯನ್ನು ಹುಡುಕಿ ಕೊಡಬೇಕು. ಆಕೆಗೆ ಏನಾದರೂ ಗರ್ಭಪಾತವಾದರೆ ಪೊಲೀಸರೇ ಹೊಣೆಯಾಗಬೇಕಾಗುತ್ತದೆ ಎಂದು ವೀರೇಶ್ ಹೇಳಿದ್ದಾರೆ. ಪತ್ನಿ ಹುಡುಕಿಕೊಡುವಂತೆ ಪೊಲೀಸ್ ಠಾಣೆಗೆ ದಿನವೂ ಅಲೆಯತೊಡಗಿದ್ದಾರೆ ಎನ್ನಲಾಗಿದೆ.