
ಕಾರವಾರ: ಪ್ರೀತಿಸಿ ಮದುವೆಯಾಗಿದ್ದ ಪುತ್ರಿ ಮತ್ತು ಅಳಿಯನಿಗೆ ಚಾಕುವಿನಿಂದ ಇರಿದ ವ್ಯಕ್ತಿ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ರಂಗಾಪುರದಲ್ಲಿ ನಡೆದಿದೆ.
ಬದನಗೋಡಿನ ಶಂಕರ ಕಮ್ಮಾರ ಎಂಬಾತ ಪುತ್ರಿ ಹಾಗೂ ಅಳಿಯನಿಗೆ ಚಾಕುವಿನಿಂದ ಇರಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರ ಪುತ್ರಿ ಮತ್ತು ಅಳಿಯ ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬದನಗೋಡಿನ ಯುವತಿ ಪೋಷಕರಿಗೆ ಮಾಹಿತಿ ನೀಡದೆ ರಂಗಾಪುರದ ಯುವಕನೊಂದಿಗೆ ಮೂರು ತಿಂಗಳ ಹಿಂದೆ ಮದುವೆಯಾಗಿದ್ದಾರೆ. ಅನ್ಯ ಜಾತಿಯ ಯುವಕ ಎಂದು ಶಂಕರ ಕಮ್ಮಾರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು.
ಪುತ್ರಿಯನ್ನು ನೋಡುವ ನೆಪದಲ್ಲಿ ರಂಗಾಪುರದಲ್ಲಿದ್ದ ಯುವಕನ ಮನೆಗೆ ಬಂದ ಅವರು ಮದುವೆಗೆ ಸಾಕ್ಷಿ ಹಾಕಿದವರ ಹೆಸರು ಹೇಳುವಂತೆ ಪುತ್ರಿಯ ಮೇಲೆ ಹಲ್ಲೆ ಮಾಡಿದ್ದಾರೆ. ತಡೆಯಲು ಬಂದ ಅಳಿಯನ ಎದೆ ಹಾಗೂ ಕೈಗೆ ಚಾಕುವಿನಿಂದ ಇರಿದಿದ್ದಾರೆ. ನಂತರ ಅಲ್ಲಿಂದ ತಪ್ಪಿಸಿಕೊಂಡು ಬಂದು ಊರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚಾಕು ಇರಿತಕ್ಕೆ ಒಳಗಾದ ಅವರ ಪುತ್ರಿ ಮತ್ತು ಅಳಿಯನನ್ನು ಶಿರಸಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಂಕರ ಕಮ್ಮಾರನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.