ಮಂಗಳೂರು: ಲವ್ ಜಿಹಾದ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮುಸ್ಲಿಂ ಮಹಿಳೆಯನ್ನು ಮುಂದಿಟ್ಟು ಹಿಂದೂ ಧರ್ಮೀಯ ವ್ಯಕ್ತಿಯನ್ನು ಮತಾಂತರಗೊಳಿಸಲಾಗಿದೆ. ವ್ಯಾಪಾರಿಯನ್ನು ಅಪಹರಣ ಮಾಡಿ ಬಲವಂತವಾಗಿ ಮದುವೆ ಮಾಡಲಾಗಿದೆ ಎಂದು ಹೇಳಲಾಗಿದ್ದ ಪ್ರಕರಣ ಮತ್ತೊಂದು ತಿರುವು ಪಡೆದಿದೆ.
ಬೋಳಾರದ 62 ವರ್ಷದ ಗಂಗಾಧರ ಮದುವೆಯಾಗಿದ್ದ ಮುಸ್ಲಿಂ ಮಹಿಳೆ ಪಾಂಡೇಶ್ವರ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದು ಆರೋಪಿಯನ್ನು ಬಂಧಿಸಲಾಗಿದೆ. ಪುತ್ತೂರು ಮೂಲದ 22 ವರ್ಷದ ಮುಸ್ಲಿಂ ಮಹಿಳೆಯ ಪತಿ ಅಪಘಾತದಲ್ಲಿ ಮೃತಪಟ್ಟಿದ್ದು, ಒಂದು ಮಗುವಿದ್ದ ಆಕೆಯನ್ನು ಗಂಗಾಧರ ಮದುವೆಯಾಗಿದ್ದಾನೆ. ಈತನಿಗೆ ಆತನ ಮುಸ್ಲಿಂ ಸ್ನೇಹಿತರು ಸಹಕಾರ ನೀಡಿದ್ದಾರೆ.
ಡಿಸೆಂಬರ್ 21 ರಂದು ಮದುವೆಯಾಗಿದ್ದು, ಮದುವೆಯಾದ ನಂತರ ಮುಸ್ಲಿಂ ಮಹಿಳೆಗೆ ಈತ ತನ್ನ ಧರ್ಮಕ್ಕೆ ಸೇರದ ವ್ಯಕ್ತಿ ಎನ್ನುವುದು ಗೊತ್ತಾಗಿದೆ. ಅಲ್ಲದೆ, ಗಂಗಾಧರ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇರುವುದು ಕೂಡ ತಿಳಿದು ಆತನಿಂದ ದೂರವಾಗಿದ್ದಾಳೆ. ಈ ನಡುವೆ ಗಂಗಾಧರ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯಾದ ಸಂದರ್ಭದಲ್ಲಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಗರ್ಭಪಾತ ಮಾಡಿಸಿದ್ದಾನೆ.
ಗಂಗಾಧರನ ಮೊದಲ ಪತ್ನಿ, ತನ್ನ ಪತಿಯನ್ನು ಅಪಹರಿಸಿ ಬಲವಂತವಾಗಿ ಮತಾಂತರ ಮಾಡಿ ಮದುವೆ ಮಾಡಲಾಗಿದೆ ಎಂದು ಮಾರ್ಚ್ 23 ರಂದು ದೂರು ನೀಡಿದ್ದಾರೆ. ಪೊಲೀಸರು ಆತನನ್ನು ವಿಚಾರಣೆ ನಡೆಸಿದಾಗ ಇವೆಲ್ಲ ಸಂಗತಿ ಗೊತ್ತಾಗಿದೆ. ಹೀಗೆ ಲವ್ ಜಿಹಾದ್ ಎಂದು ಹೇಳಲಾಗಿದ್ದ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಗಂಗಾಧರನಿಗೆ ಈಗಾಗಲೇ ಮದುವೆಯಾಗಿದ್ದು, ಇನ್ನು ಹಲವರನ್ನು ವಂಚಿಸಿ ಮದುವೆಯಾದ ಬಗ್ಗೆ ಮಾಹಿತಿ ಪಡೆದ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.