ಮದುವೆ ಎನ್ನುವುದು ಜೀವನದ ಒಂದು ಅಮೂಲ್ಯ ಮತ್ತು ಅಮೃತವಾದ ಘಳಿಗೆ. ನಿಗದಿತ ಸಮಯದಲ್ಲೇ ವಿವಾಹವಾಗುವುದು ವಾಡಿಕೆ. ಸಾಮಾನ್ಯವಾಗಿ ಈ ನಿಗದಿತ ಸಮಯವನ್ನು ಬಿಟ್ಟು ಬೇರೆ ಸಮಯದಲ್ಲಿ ಮದುವೆ ಕಾರ್ಯಗಳನ್ನು ನಡೆಸುವುದಿಲ್ಲ.
ಒಂದು ವೇಳೆ ಮದುವೆ ಆ ಸಮಯಕ್ಕೆ ಸರಿಯಾಗಿ ನಡೆಯಲು ಸಾಧ್ಯವಾಗದಿದ್ದರೆ ಇನ್ನೊಂದು ಸಮಯವನ್ನು ನಿಗದಿಪಡಿಸಲಾಗುತ್ತದೆ. ಆದರೆ, ಓಕ್ಲಾಹೊಮಾ ನಗರದ ವಧು-ವರರಾದ ಪಾಮ್ ಪ್ಯಾಟರ್ಸನ್ ಮತ್ತು ಜೆರೆಮಿ ಸಲ್ಡಾ ಲಾಸ್ ವೆಗಾಸ್ ನಲ್ಲಿ ವಿವಾಹವಾಗಲು ಎಲ್ಲಾ ತಯಾರಿ ನಡೆಸಿ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಮೊದಲಿಗೆ ತಾವು ಪ್ರಯಾಣಿಸಬೇಕಿದ್ದ ವಿಮಾನ ತಡವಾಗಿ ಹೊರಡುತ್ತದೆ ಎಂದು ವಿಮಾನ ಸಂಸ್ಥೆ ಸಿಬ್ಬಂದಿ ತಿಳಿಸಿದ್ದಾರೆ. ಹೀಗೆ ಎಷ್ಟು ಹೊತ್ತು ಕಾಯ್ದರೂ ವಿಮಾನ ಮಾತ್ರ ಟೇಕ್ ಆಫ್ ಆಗಲಿಲ್ಲ. ಅಂತಿಮವಾಗಿ ಸಿಬ್ಬಂದಿ ವಿಮಾನ ಸಂಚಾರವೇ ರದ್ದಾಗಿದೆ ಎಂದು ಘೋಷಣೆ ಮಾಡಿದ್ದಾರೆ. ಅರೆಕ್ಷಣ ಈ ವಧು – ವರರಿಗೆ ದಿಕ್ಕೇ ತೋಚದಂತಾಗಿದೆ.
ಆದರೂ ಸಾವರಿಸಿಕೊಂಡು ಮುಂದಿನ ಯೋಜನೆಯ ಬಗ್ಗೆ ಪರಸ್ಪರ ಚರ್ಚಿಸಿದ್ದಾರೆ. ಲಾಸ್ ವೆಗಾಸ್ ಗೆ ಹೊರಡಲಿದ್ದ ವಿಮಾನದಲ್ಲಿ ಪ್ರಯಾಣ ಮಾಡಲು ಟಿಕೆಟ್ ಖರೀದಿಸಿದ್ದರು. ಅದೇ ವಿಮಾನದಲ್ಲಿ ಪ್ರಯಾಣ ಮಾಡಲಿದ್ದ ಕ್ರಿಸ್ ಎಂಬ ಪಾದ್ರಿಯನ್ನು ಸಂಪರ್ಕಿಸಿ ತಮ್ಮ ವಿವಾಹ ಮತ್ತು ವಿಮಾನ ರದ್ದಾದ ಬಗ್ಗೆ ಪ್ರಸ್ತಾಪ ಮಾಡಿ, ತಾವು ವಿಮಾನದಲ್ಲಿಯೇ ಮದುವೆಯಾಗಲು ನಿರ್ಧರಿಸಿದ್ದೇವೆ. ದಯಮಾಡಿ ನಮ್ಮ ವಿವಾಹ ಕಾರ್ಯವನ್ನು ನೀವೇ ನಡೆಸಿಕೊಡಬೇಕೆಂದು ಮನವಿ ಮಾಡಿದಾಗ ಕ್ರಿಸ್ ಒಪ್ಪಿಗೆ ಸೂಚಿಸಿದ್ದಾರೆ.
ಸೌತ್ ವೆಸ್ಟ್ ಏರ್ ಲೈನ್ಸ್ ನ ವಿಮಾನ ಲಾಸ್ ವೆಗಾಸ್ ಕಡೆಗೆ ಪ್ರಯಾಣಿಸಲು ಟೇಕಾಫ್ ಆಗುತ್ತಿದ್ದಂತೆಯೇ ವಿಮಾನದಲ್ಲಿ ಮದುವೆ ಸಡಗರ ಮೇಳೈಸಿತ್ತು. ವಿಮಾನದ ಸಿಬ್ಬಂದಿ ಪಟಪಟನೇ ಮದುವೆಗೆ ಸಾಕ್ಷಿಯಾಗಲಿದ್ದ ಪ್ರಯಾಣಿಕ ಅತಿಥಿಗಳಿಗೆ ಸ್ನ್ಯಾಕ್ಸ್ ಸೇರಿದಂತೆ ಇನ್ನಿತರೆ ಆತಿಥ್ಯವನ್ನು ನೀಡಿದರೆ, ಪ್ರಯಾಣಿಕರೊಬ್ಬರು ಹಳೆಯ ನೋಟ್ ಬುಕ್ ಅನ್ನು ಪಡೆದು ಅದರಲ್ಲಿ ಎಲ್ಲಾ ಪ್ರಯಾಣಿಕರಿಂದ ಸಹಿ ಹಾಕಿಸಿದರು.
ಅಷ್ಟರೊಳಗೆ ಧರ್ಮಗುರು ಕ್ರಿಸ್ ಅವರು ಪಾಮ್ ಪ್ಯಾಟರ್ಸನ್ ಮತ್ತು ಜೆರೆಮಿ ಸಲ್ಡಾ ಅವರ ವಿವಾಹ ಕಾರ್ಯವನ್ನು ಪೂರ್ಣಗೊಳಿಸಿದರು. ಪ್ರಯಾಣಿಕರಲ್ಲಿ ಓರ್ವ ಮಹಿಳೆ ವೃತ್ತಿಪರ ಫೋಟೋಗ್ರಾಫರ್ ಆಗಿದ್ದು, ತಮ್ಮ ಕ್ಯಾಮೆರಾದಲ್ಲಿ ಈ ಸುಂದರ ಕ್ಷಣವನ್ನು ಸೆರೆಹಿಡಿದರು.