ಕೊವಿಡ್-19 ಸಾಂಕ್ರಮಿಕದ ಕಾರಣದಿಂದ ವಿದ್ಯಾರ್ಥಿಗಳಿಗೆ ಕಳೆದುಹೋದ ಶೈಕ್ಷಣಿಕ ದಾಖಲೆಗಳನ್ನು ಮರಳಿ ಪಡೆಯಲು ಅವಕಾಶವೇ ಇಲ್ಲದಂತಾಗಿದೆ. ಇದಕ್ಕೆಂದೇ ಹೊಸ ವ್ಯವಸ್ಥೆಯನ್ನು ತಂದಿರುವ ಕೇಂದ್ರ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ವಿದ್ಯಾರ್ಥಿಗಳಿಗೆ ತಮ್ಮ ಅಂಕಪಟ್ಟಿ ಸೇರಿದಂತೆ ಶೈಕ್ಷಣಿಕ ದಾಖಲೆಗಳನ್ನು ಪಡೆಯುವುದನ್ನು ಸರಳಗೊಳಿಸಿದೆ.
ಈ ಹಿಂದೆ ಸಿಬಿಎಸ್‌ಇ ವಿದ್ಯಾರ್ಥಿಗಳೇನಾದರೂ ತಮ್ಮ ಅಂಕಪಟ್ಟಿಗಳನ್ನು ಕಳೆದುಕೊಂಡಲ್ಲಿ, ಅವುಗಳ ನಕಲು ಪ್ರತಿಗಳನ್ನು ಪಡೆಯಲು ಖುದ್ದಾಗಿ ಸಿಬಿಎಸ್‌ಇನ ಪ್ರಾದೇಶಿಕ ಕಾರ್ಯಾಲಯಕ್ಕೆ ಭೇಟಿ ಕೊಟ್ಟು, ನಿಗದಿತ ಶುಲ್ಕ ಪಾವತಿ ಮಾಡಿ, ಅರ್ಜಿಗಳು ಹಾಗೂ ಬ್ಯಾಂಕ್ ಡ್ರಾಫ್ಟ್‌ಗಳನ್ನು ಪತ್ರಮುಖೇನ ಕಳುಹಿಸಬೇಕಿತ್ತು.
ಇದೀಗ ಡಾಡ್ಸ್ (ಶೈಕ್ಷಣಿಕ ದಾಖಲೆಗಳ ನಕಲು ವ್ಯವಸ್ಥೆ) ಮುಖಾಂತರ ವಿದ್ಯಾರ್ಥಿಗಳಿಗೆ ಕಳೆದುಹೋದ ತಮ್ಮ ಶೈಕ್ಷಣಿಕ ದಾಖಲೆಗಳ ನಕಲು ಪ್ರತಿಗಳನ್ನು ಪಡೆಯಲು ಅನುವು ಮಾಡಿಕೊಡಲಾಗಿದೆ.
ಇದಕ್ಕಾಗಿ ವಿದ್ಯಾರ್ಥಿಗಳು www.cbse.nic.in ಜಾಲತಾಣಕ್ಕೆ ಭೇಟಿ ಕೊಟ್ಟು, ಅಲ್ಲಿ https://cbseit.in/cbse/web/dads/home.aspx ಲಿಂಕ್ ಮೂಲಕ ತಮಗೆ ಬೇಕಾದ ದಾಖಲೆಗಳನ್ನು ಪಡೆಯಲು ಅರ್ಜಿ ಸಲ್ಲಿಸಬೇಕಾಗಿದೆ. ಈ ಅರ್ಜಿಗಳು ಆಯಾ ಪ್ರಾದೇಶಿಕ ಕಾರ್ಯಾಲಯಗಳಿಗೆ ತಲುಪಿ ಅಲ್ಲಿ ಕೋರಲಾದ ದಾಖಲೆಗಳ ಪ್ರಿಂಟಿಂಗ್ ಆಗುತ್ತದೆ.