ಕಾಳಿದೇವಿ ಕೈಯಲ್ಲಿ ಸಿಗರೇಟ್ ಪೋಸ್ಟರ್ ವಿವಾದ ಇನ್ನೂ ತಣ್ಣಗಾಗಿಲ್ಲ. ಆಗಲೇ ಇನ್ನೊಂದು ಹೊಸ ವಿವಾದ ಹುಟ್ಟಿಕೊಂಡಿದೆ. ಅದೇನೆಂದರೆ, ಶಿವ ಸಿಗರೇಟು ಹೊತ್ತಿಸುವ ಪೋಸ್ಟರ್ ಈಗ ವೈರಲ್ ಆಗಿದೆ. ಈ ವೈರಲ್ ಆಗಿರುವ ಪೋಸ್ಟರ್ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಕಂಡು ಬಂದಿದೆ. ಪೊಲೀಸರು ಈ ಬ್ಯಾನರ್ ಹಾಕಿದವರನ್ನ ಕರೆದು ಅವರಿಗೆ ವಾರ್ನಿಂಗ್ ಕೊಟ್ಟು, ಆ ಬ್ಯಾನರ್‌ನ್ನ ಕಿತ್ತು ಹಾಕಿಸಿದ್ದಾರೆ. ಆದರೆ ಈ ರೀತಿ ಪೋಸ್ಟರ್ ಹಾಕಿದ್ದು ತಪ್ಪು ಅಂತ ಹಿಂದೂ ಸಂಘಟನಾಕಾರರು ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.
ಕನ್ಯಾಕುಮಾರಿಯ ಥಿಂಗಲ್ ಜಿಲ್ಲೆಯ ಆರೋಗ್ಯಪುರಂ ಎಂಬಲ್ಲಿ ಹೀಗೆ ಶಿವ ಸಿಗರೇಟು ಹೊತ್ತಿಸುವ ಬ್ಯಾನರ್ ಹಾಕಿರುವುದು ಕಂಡು ಬಂದಿದೆ. ಕೆಲವು ದಿನಗಳ ಹಿಂದೆ, ಇಲ್ಲಿ ಒಂದು ಮದುವೆ ಕಾರ್ಯಕ್ರಮ ನಡೆದಿತ್ತು. ಮದುಮಗನಿಗೆ ವಿಶೇಷವಾಗಿ ಶುಭಕೋರಲು ಆತನ ಗೆಳೆಯರು ಈ ರೀತಿಯ ಬ್ಯಾನರ್ ಮಾಡಿಸಿದ್ದಾರೆ. ಎರಡು ಬ್ಯಾನರ್‌ಗಳನ್ನ ಅಲ್ಲಲ್ಲಿ ಹಾಕಲಾಗಿದ್ದು ಕಂಡು ಬಂದಿದೆ.
ನವವರ ಜೋಡಿ ಜೊತೆಗೆ ಶಿವ ಪಾರ್ವತಿ ಫೋಟೋ ಬಳಸಲಾಗಿದೆ. ಇನ್ನೊಂದರಲ್ಲೂ ಜೋಡಿಗಳ ಫೋಟೋ ಜೊತೆಗೆ ಶಿವ ಸಿಗರೇಟು ಹೊತ್ತಿಸುವ ಫೋಟೋ ಬಳಸಿದ್ದಾರೆ. ಇದು ಗೆಳೆಯರು ವರನಿಗೆ ರೇಗಿಸುವುದಕ್ಕಂತ ಈ ರೀತಿಯ ಪೋಸ್ಟರ್‌ಗಳನ್ನ ಮಾಡಿಸಿದ್ದರು ಅಂತ ಹೇಳಲಾಗಿದೆ. ಆದರೆ ಇಲ್ಲಿ ಶಿವನನ್ನ ಅವಮಾನಿಸಲಾಗಿದೆ ಅಂತ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಈ ಬ್ಯಾನರ್ ವೈರಲ್ ಆಗ್ತಿರುವ ಹಾಗೆಯೇ ಸ್ಥಳೀಯ ಪೊಲೀಸರು ವರ ಹಾಗೂ ಆತನ ಗೆಳೆಯರನ್ನ ಕರೆದು ತರಾಟೆ ತೆಗೆದುಕೊಂಡಿದ್ದಾರೆ. ಜೊತೆಗೆ ಅದನ್ನ ಕಿತ್ತು ಹಾಕಲು ಹೇಳಿದ್ದಾರೆ.
ಇತ್ತೀಚೆಗಷ್ಟೆ ಲೀನಾ ಮಣಿಮೇಕಲೈ ಅನ್ನೊ ನಿರ್ದೇಶಕಿ ತನ್ನ ಡಾಕ್ಯುಮೆಂಟರಿ ಸಿನೆಮಾಗಾಗಿ ಕಾಳಿ ಪಾತ್ರಧಾರಿ ಕೈಯಲ್ಲಿ ಸಿಗರೇಟು ಹೊತ್ತಿಸುವ ಫೋಟೋ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಶೇರ್ ಮಾಡಿ ವಿವಾದವನ್ನ ಹುಟ್ಟು ಹಾಕಿದ್ದರು. ಆ ವಿವಾದ ಇನ್ನೂ ಹೊತ್ತಿ ಉರಿಯುತ್ತಿರುವಾಗಲೇ, ಈಗ ಈ ರೀತಿಯ ಬ್ಯಾನರ್, ಫೋಟೋಗಳು ಮತ್ತಷ್ಟು ಅಲ್ಲಲ್ಲಿ ಕಾಣಿಸಿಕೊಂಡಿದ್ದು, ಇದು ಈ ರೀತಿಯ ವಿವಾದ ಇನ್ನಷ್ಟು ಹೊತ್ತಿ ಉರಿಯುವಂತೆ ಮಾಡಿದೆ.