ಚುನಾವಣೆಯಲ್ಲಿ ಮತಗಳನ್ನು ಸೆಳೆಯಲು ಬಿಜೆಪಿ ಶ್ರೀರಾಮನ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆಪಾದಿಸಿರುವ ಜಮ್ಮು & ಕಾಶ್ಮೀರದ ಮಾಜಿ ಮುಖ್ಯಮಂತ್ರಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಫಾರೂಕ್ ಅಬ್ದುಲ್ಲಾ, ಶ್ರೀರಾಮ ಚಂದ್ರ ಎಲ್ಲರಿಗೂ ದೇವರು ಎಂದಿದ್ದಾರೆ.
ಉಧಂಪುರ ಜಿಲ್ಲೆಯ ಘರ್ನಾಯಿ ಎಂಬಲ್ಲಿ ರ‍್ಯಾಲಿಯೊಂದರಲ್ಲಿ ಮಾತನಾಡಿದ ಫಾರೂಕ್, “ಪರೀಕ್ಷೆಗಳು (ಚುನಾವಣೆಗಳು) ಹತ್ತಿರವಾಗುತ್ತಿದ್ದು, ಇಲ್ಲಿ ಭಾರೀ ಪ್ರಮಾಣದಲ್ಲಿ ದುಡ್ಡು ಸುರಿಯಲಾಗುವುದು. ನಮ್ಮ ತಾಯಂದಿರು ಹಾಗೂ ಮಕ್ಕಳಿಗೆ ಪದೇ ಪದೇ ದೇವಸ್ಥಾನದ ಕುರಿತು ಹೇಳಲಾಗುತ್ತದೆ. ಅದೇ ದಿನದಂದು ಬಿಜೆಪಿ ರಾಮ ಮಂದಿರವನ್ನು ಉದ್ಘಾಟನೆ ಮಾಡಲೂಬಹುದು. ಹೀಗೆ ಮಾಡುವುದರಿಂದ ಜನರಿಗೆ ಬೆಲೆಯೇರಿಕೆ ಹಾಗೂ ನಿರುದ್ಯೋಗಗಳಂಥ ಸಮಸ್ಯೆಗಳು ಮರೆತುಹೋಗಬಹುದು ಹಾಗೂ ಬಿಜೆಪಿಯವರು ರಾಮನ ಭಕ್ತರು ಎಂದು ಯೋಚಿಸಬಹುದು,” ಎಂದು ತಿಳಿಸಿದ್ದಾರೆ.
ಶ್ರೀರಾಮ ಎಲ್ಲರಿಗೂ ದೇವರಾಗಿದ್ದು, ಬಿಜೆಪಿ ಆತನನ್ನೇ ಮಾರಾಟ ಮಾಡುತ್ತಿದೆ ಎಂದ ಅಬ್ದುಲ್ಲಾ, “ಶ್ರೀರಾಮ ಹಿಂದೂಗಳಿಗೆ ಮಾತ್ರವೇ ದೇವರಲ್ಲ, ಇದನ್ನು ಮನಸ್ಸುಗಳಿಂದ ಕಿತ್ತು ಹಾಕಬೇಕಿದೆ. ಶ್ರೀರಾಮ ಎಲ್ಲರಿಗೂ ದೇವರು. ಮುಸ್ಲಿಮರು, ಕ್ರಿಶ್ಚಿಯನ್ನರು ಹಾಗೂ ಇತರರಿಗೂ. ಹಾಗೆಯೇ, ಅಲ್ಲಾಹು ಸಹ ಎಲ್ಲರಿಗೂ ದೇವರು, ಬರೀ ಮುಸ್ಲಿಮರಿಗೆ ಮಾತ್ರವಲ್ಲ. ಇತ್ತೀಚೆಗೆ ನಿಧನರಾದ ಪಾಕಿಸ್ತಾನಿ ಲೇಖಕರೊಬ್ಬರು ಜನರಿಗೆ ಸರಿಯಾದ ದಾರಿಯಲ್ಲಿ ಕೊಂಡೊಯ್ಯಲು ರಾಮನನ್ನು ಅಲ್ಲಾಹುವೇ ಕಳುಹಿಸಿದ್ದಾರೆ ಎಂದು ಬರೆದಿದ್ದರು. ಹೀಗಾಗಿ ನಾವು ಕೇವಲ ಶ್ರೀರಾಮನ ಭಕ್ತರು ಎಂದು ಹೇಳಿಕೊಳ್ಳುವವರು ಮೂರ್ಖರು. ಅವರಿಗೆ ರಾಮನನ್ನು ಮಾತ್ರ ಮಾರಬೇಕಿದೆ, ರಾಮನ ಮೇಲೆ ಅವರಿಗೆ ಯಾವುದೇ ಪ್ರೀತಿಯಿಲ್ಲ, ಅವರಿಗೆ ಬರೀ ಅಧಿಕಾರದ ಮೇಲೆ ಪ್ರೀತಿ,” ಎಂದಿದ್ದಾರೆ.
“ಹೀಗಾಗಿಯೇ ನಾನು ಹೇಳಲು ಇಚ್ಛಿಸುವುದೆನೆಂದರೆ, ಈ ದ್ವೇಷದ ಬೀಜದ ಬಿತ್ತನೆಯನ್ನು ನಾವು ಕೊನೆಗೊಳಿಸಬೇಕಿದೆ. ವಾರಣಾಸಿಯಲ್ಲಿ ದೊಡ್ಡ ಮಟ್ಟದಲ್ಲಿ ದೀಪೋತ್ಸವ ಆಯೋಜಿಸಲಾಗಿತ್ತು. ಆದರೆ ಬಡ ಮಹಿಳೆಯರು ದೀಪಗಳಿಂದ ಎಣ್ಣೆ ಸಂಗ್ರಹಿಸುತ್ತಿದ್ದರು. ಇದು ಸದ್ಯದ ಪರಿಸ್ಥಿತಿಯನ್ನು ತೋರುತ್ತದೆ,” ಎಂದಿದ್ದಾರೆ ಫಾರೂಕ್ ಅಬ್ದುಲ್ಲಾ.