ವಾರಣಾಸಿಯ ಸಾರಾನಾಥ್ ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾದ ಜನಪ್ರಿಯ ಭೋಜ್‌ಪುರಿ ನಟಿ ಆಕಾಂಕ್ಷಾ ದುಬೆ ಆತ್ಮಹತ್ಯೆಗೆ ಸಂಬಂಧಿಸಿದಂತೆ ಗಾಯಕ ಸಮರ್ ಸಿಂಗ್ ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದೆ.
ಇಬ್ಬರು ಆರೋಪಿಗಳಾದ ಸಮರ್ ಸಿಂಗ್ ಮತ್ತು ಸಂಜಯ್ ಸಿಂಗ್ ಅವರು ದೇಶ ಬಿಟ್ಟು ಹೋಗದಂತೆ ಅವರ ವಿವರಗಳನ್ನು ಎಲ್ಲಾ ವಿಮಾನ ನಿಲ್ದಾಣಗಳಿಗೆ ಕಳುಹಿಸಲಾಗಿದೆ.
ನಟಿಯ ತಾಯಿ ಮಧು ದುಬೆ ಪರ ಪ್ರಕರಣವನ್ನು ಕೈಗೆತ್ತಿಕೊಂಡಿರುವ ವಕೀಲ ಶಶಕ್ ಶೇಖರ್ ತ್ರಿಪಾಠಿ, ಬುಧವಾರ ಸಿಬಿಐ ಅಥವಾ ಸಿಬಿ- ಸಿಐಡಿಯಿಂದ ಈ ಪ್ರಕರಣದ ತನಿಖೆಗೆ ಒತ್ತಾಯಿಸಿದ್ದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿರುವ ಅವರು, 25 ವರ್ಷದ ನಟಿಯ ಸಾವು ಆತ್ಮಹತ್ಯೆಯಿಂದಲ್ಲ, ಬದಲಿಗೆ ಹೋಟೆಲ್ ಕೋಣೆಯಲ್ಲಿ ಕೆಲವರು ಅವಳನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಅಂತ್ಯಸಂಸ್ಕಾರ ನಡೆಸಬೇಕು ಎಂದು ತಾಯಿ ಒತ್ತಾಯ ಮಾಡಿದರೂ ಆಕಾಂಕ್ಷಾ ಶವವನ್ನು ಬಲವಂತವಾಗಿ ಸುಟ್ಟು ಹಾಕಲಾಗಿದೆ ಎಂದು ಆರೋಪಿಸಿದರು.
ಅನೇಕರು ಆಕಾಂಕ್ಷಾ ದುಬೆಯನ್ನ ಶೋಷಿಸುತ್ತಿದ್ದರು, ಆಕೆಯ ಕೆಲಸಕ್ಕೆ ಸರಿಯಾದ ಮೊತ್ತವನ್ನು ಪಾವತಿಸುತ್ತಿರಲಿಲ್ಲ ಎಂದು ವಕೀಲರು ಆರೋಪಿಸಿದ್ದಾರೆ.
25 ವರ್ಷದ ನಟಿ ಮಾರ್ಚ್ 26 ರಂದು ಫ್ಯಾನ್‌ಗೆ ಬಟ್ಟೆಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.