ಸ್ಮಾರ್ಟ್ಫೋನ್ ಬಂದ ಬಳಿಕ ಬ್ಯಾಂಕಿಂಗ್ ವಹಿವಾಟು ಬಲು ಸುಲಭವಾಗಿದ್ದು, ವ್ಯವಹಾರಗಳಿಗಾಗಿ ಬ್ಯಾಂಕಿಗೆ ಹೋಗದೆ ಕೇವಲ ಮೊಬೈಲ್ ಮೂಲಕವೇ ಇದನ್ನು ಮಾಡಬಹುದಾಗಿದೆ. ಇದು ಆನ್ಲೈನ್ ವಂಚಕರಿಗೂ ಸಹ ವರದಾನವಾಗಿ ಪರಿಣಮಿಸಿದ್ದು, ಪೊಲೀಸರು ಈ ಕುರಿತಂತೆ ಸಾರ್ವಜನಿಕರಿಗೆ ಎಷ್ಟೇ ಎಚ್ಚರಿಕೆ ನೀಡಿದರೂ ಸಹ ಪದೇ ಪದೇ ಮೋಸ ಹೋಗುತ್ತಲೇ ಇದ್ದಾರೆ. ಈ ಮೂಲಕ ಲಕ್ಷಾಂತರ ಹಣ ಕ್ಷಣಾರ್ಧದಲ್ಲಿಯೇ ವಂಚಕರ ಪಾಲಾಗುತ್ತಿದೆ.
ಕಳೆದ ಕೆಲವು ದಿನಗಳಿಂದ ಇಂತಹ ವಂಚನಾ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಅಮಾಯಕರನ್ನು ಬೆದರಿಸಿ ಹಣ ಪೀಕಲಾಗುತ್ತಿದೆ. ವಂಚಕರು ತಮ್ಮ ಈ ವಂಚನೆಗೆ ಸಂತ್ರಸ್ಥರ ಆಧಾರ್ ಕಾರ್ಡ್, ಪಾನ್ ಕಾರ್ಡ್ ಮೊದಲಾದವುಗಳ ವಿವರಗಳನ್ನು ಬಳಸಿಕೊಳ್ಳುತ್ತಿದ್ದು, ಅವರ ಕರೆಯನ್ನು ನಿಜವೆಂದು ನಂಬುವ ಅಮಾಯಕರು ಅವರು ಹೇಳಿದ ಖಾತೆಗೆ ಹಣ ಹಾಕಿ ಸತ್ಯ ತಿಳಿದ ಬಳಿಕ ಕುಸಿದು ಹೋಗುತ್ತಾರೆ.
ಮೊದಲಿಗೆ ಈ ವಂಚಕರು ತಾವು ಪಡೆದುಕೊಂಡಿದ್ದ ಸಂತ್ರಸ್ತರ ಆಧಾರ್, ಪಾನ್ ಕಾರ್ಡ್ (ಬಹುತೇಕ ಕೆಲಸಗಳಿಗೆ ನಾವು ಇವುಗಳನ್ನು ಬಳಸುವ ಕಾರಣ ಇದರ ಮಾಹಿತಿ ಸುಲಭವಾಗಿ ವಂಚಕರಿಗೆ ಲಭ್ಯವಾಗುತ್ತದೆ) ವಿವರದ ಮೂಲಕ ಫೋನ್ ನಂಬರ್ ನಿಂದ ಅವರನ್ನು ಸಂಪರ್ಕಿಸುತ್ತಾರೆ. ನಿಮ್ಮ ಆಧಾರ್ ಅಥವಾ ಪಾನ್ ಕಾರ್ಡ್ ಬಳಸಿ ತೆರೆದಿರುವ ಬ್ಯಾಂಕ್ ಖಾತೆಯಲ್ಲಿ ದೊಡ್ಡಮಟ್ಟದ ಕಪ್ಪು ಹಣ ಇಡಲಾಗಿದೆ ಎಂದು ಬೆದರಿಸುತ್ತಾರೆ. (ಅವರ ಬೆದರಿಕೆ ಬೇರೆ ರೀತಿಯಲ್ಲಿಯೂ ಇರಬಹುದು.) ಅಮಾಯಕರನ್ನು ಬೆದರಿಸಲು ಸಿಬಿಐ, ಸುಪ್ರೀಂ ಕೋರ್ಟ್ ಮೊದಲಾದವುಗಳ ಹೆಸರನ್ನು ಉಲ್ಲೇಖಿಸುವುದರ ಜೊತೆಗೆ ನಿಮ್ಮ ಹೆಸರು ಸಂಬಂಧ ಪಟ್ಟ ಇಲಾಖೆಗಳ ಲೆಟರ್ ಹೆಡ್ನಲ್ಲಿ ಆಧಾರ್, ಪಾನ್ ಕಾರ್ಡ್ ನಂಬರ್ ಸಮೇತ ನೀವು ಮಾಡದ ಅಪರಾಧದ ವಿವರವನ್ನು ನಮೂದಿಸಿರುತ್ತಾರೆ. ಇದನ್ನು ವಾಟ್ಸಾಪ್ ಗೂ ರವಾನಿಸುತ್ತಾರೆ.
ಆ ಬಳಿಕ ಮತ್ತೊಬ್ಬ ವಂಚಕ, ಹಿರಿಯ ಅಧಿಕಾರಿಯ ಹೆಸರಿನಲ್ಲಿ ವಾಟ್ಸಾಪ್ ಕಾಲ್ ಮೂಲಕ ಸಂತ್ರಸ್ತರನ್ನು ಸಂಪರ್ಕಿಸುತ್ತಾನೆ. ಆ ಸಂದರ್ಭದಲ್ಲಿ ಸಂತ್ರಸ್ತ ವ್ಯಕ್ತಿ ಬೇರೆ ಯಾರನ್ನೂ ಸಂಪರ್ಕಿಸದಂತೆ ಇರುವ ಸಲುವಾಗಿ ಕಾಲ್ ಕಟ್ ಮಾಡಬೇಡಿ, ಇದು ರೆಕಾರ್ಡ್ ಆಗುತ್ತಿದೆ. ಅಲ್ಲದೆ ವಿಷಯವನ್ನು ಯಾರಿಗೂ ತಿಳಿಸಬೇಡಿ ಎಂದು ಬೆದರಿಕೆ ಹಾಕುತ್ತಾರೆ. (ಯಾರನ್ನಾದರೂ ಸಂಪರ್ಕಿಸಿದರೆ ತಮ್ಮ ವಂಚನೆ ಬಯಲಾಗಬಹುದು ಹಾಗೂ ದುಡ್ಡು ಲಪಟಾಯಿಸುವುದು ಕಷ್ಟವಾಗಬಹುದು ಎಂಬ ಕಾರಣಕ್ಕೆ) ಮತ್ತೊಂದು ಶಾಕಿಂಗ್ ಸಂಗತಿ ಎಂದರೆ ವಿಡಿಯೋ ಕಾಲ್ ನಲ್ಲಿ ವಂಚಕರು ಪೋಲಿಸ್ ಯೂನಿಫಾರಂನಲ್ಲಿ ಇರುತ್ತಾರೆ. ಜೊತೆಗೆ ಅದೊಂದು ಪೊಲೀಸ್ ಠಾಣೆಯಂತೆ ತೋರಿಸುವ ಸಲುವಾಗಿ ವಾಕಿಟಾಕಿ ಸೇರಿದಂತೆ ಎಲ್ಲವೂ ಇರುತ್ತದೆ.
ನಂತರ ಈಗಾಗಲೇ ಹೆದರಿದ್ದ ಸಂತ್ರಸ್ತ ವ್ಯಕ್ತಿಗೆ ನಾವು ಕಳುಹಿಸುವ ಬ್ಯಾಂಕ್ ಖಾತೆಗೆ ಹಣ ಹಾಕುವಂತೆ ಸೂಚಿಸುತ್ತಾರೆ. ಇದು ನಿಮಗೆ ಪ್ರಕರಣದಿಂದ ಪಾರಾಗಲು ಸಹಾಯ ಮಾಡುತ್ತದೆ ಎಂದು ಹೇಳುತ್ತಾರೆ. ಅವರು ಕೊಡುವುದು ಹೊರ ರಾಜ್ಯದ ಯಾವುದೋ ಕಿರಾಣಿ ಅಂಗಡಿಯ ಅಥವಾ ಅವರಿಗೆ ಪರಿಚಿತನಾಗಿರುವ ವ್ಯಕ್ತಿಯ ಅಕೌಂಟ್ ನಂಬರ್. ಇವರ ಕರೆಯಿಂದ ಹೆದರಿರುವವರು ಹಣ ಹಾಕಿದ ಬಳಿಕ ಅಷ್ಟಕ್ಕೆ ಬಿಡದೆ ಮತ್ತೆ ಪದೇ ಪದೇ ಬೆದರಿಕೆ ಹಾಕುತ್ತಾ ಹಣ ಹಾಕಿಸಿಕೊಳ್ಳುತ್ತಿರುತ್ತಾರೆ. ಹಣ ಕಳೆದುಕೊಂಡ ವ್ಯಕ್ತಿಗೆ ತಾನು ಮೋಸ ಹೋಗಿರುವುದು ಅರಿವಿಗೆ ಬರುವವರೆಗೂ ಇವರ ಮೋಸದಾಟ ಮುಂದುವರೆಯುತ್ತದೆ, ಬಳಿಕ ಮತ್ತೊಬ್ಬರಿಗಾಗಿ ಹುಡುಕುತ್ತಾರೆ. ಹೀಗಾಗಿ ಇಂತಹ ವಂಚನೆಗಳಿಂದ ಪಾರಾಗಬೇಕೆಂದರೆ ಅಪರಿಚಿತ ಕರೆ ಬಂದಾಗ ಅವರೊಂದಿಗೆ ಯಾವುದೇ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬಾರದು. ಅವರು ಪದೇ ಪದೇ ಕರೆ ಮಾಡುತ್ತಿದ್ದರೆ ಅಂತಹ ಕರೆಯನ್ನು ಬ್ಲಾಕ್ ಮಾಡುವುದು ಸೂಕ್ತ. ಒಂದು ವಿಷಯ ಗಮನದಲ್ಲಿರಲಿ ಸಿಬಿಐ, ಇಡಿ, ಪೊಲೀಸ್ ಸೇರಿದಂತೆ ಯಾವುದೇ ಇಲಾಖೆಯ ಅಧಿಕಾರಿಗಳು ಫೋನ್ ಕರೆ ಮಾಡಿ ನಿಮಗೆ ಬ್ಯಾಂಕ್ ವಿವರಗಳನ್ನು ಕೇಳುವುದಿಲ್ಲ. (ಬ್ಯಾಂಕುಗಳು ಸಹ ತಮ್ಮ ಗ್ರಾಹಕರಿಗೆ ಈ ಕುರಿತಂತೆ ಪದೇ ಪದೇ ಸಂದೇಶ ಕಳುಹಿಸುತ್ತಿರುತ್ತವೆ) ಒಂದೊಮ್ಮೆ ನಿಮಗೆ ಕರೆ ಬಂದಾಗ ಅನುಮಾನ ಬಂದರೆ ಸಮೀಪದ ಸೈಬರ್ ಕ್ರೈಂ ಪೊಲೀಸರಿಗೆ ಮಾಹಿತಿ ನೀಡುವುದು ಸೂಕ್ತ.