
ಯುಎಇನಲ್ಲಿ ಮೊದಲ ಸಾಂಪ್ರದಾಯಿಕ ಹಿಂದೂ ದೇವಾಲಯ ನಿರ್ಮಾಣಕ್ಕಾಗಿ ಅಡಿಪಾಯದ ಕೆಲಸ ಭರದಿಂದ ಸಾಗಿದ್ದು, ಏಪ್ರಿಲ್ ನಲ್ಲಿ ಬಹುತೇಕ ಪೂರ್ಣಗೊಳ್ಳಲಿದೆ.
ಅಬುದಾಬಿಯ ಅಬುಮುರೇಖಾದಲ್ಲಿ ಕಾಮಗಾರಿ ಭರದಿಂದ ಸಾಗಿದೆ. ನೆಲಮಟ್ಟದಿಂದ 4.5 ಮೀಟರ್ ಎತ್ತರದ ಅಡಿಪಾಯ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹಿಂದೂ ಮಂದಿರ ಅಬುಧಾಬಿಯ ಬಿಎಪಿಎಸ್ ಯೋಜನಾ ಇಂಜಿನಿಯರ್ ತಿಳಿಸಿದ್ದಾರೆ.

ದೇವಾಲಯ ನಿರ್ಮಾಣಕ್ಕಾಗಿ ರಾಜಸ್ಥಾನ ಮತ್ತು ಗುಜರಾತ್ ನಿಂದ ಕಲ್ಲುಗಳನ್ನು ತರಲಾಗಿದೆ. 2000 ವಾಸ್ತುಶಿಲ್ಪಿಗಳು ಕೆತ್ತನೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ರಾಜಸ್ಥಾನದಿಂದ ಗುಲಾಬಿ ಕಲ್ಲುಗಳು, ಇಟಲಿಯ ಮ್ಯಾಸಿಡೋನಿಯಾದಿಂದ ಅಮೃತಶಿಲೆ ತರಲಾಗಿದ್ದು, ರಾಜಸ್ಥಾನದಲ್ಲಿ ಕಲ್ಲುಗಳ ಕೆತ್ತನೆ ಕಾರ್ಯ ನಡೆದಿದೆ.

ಅಬುದಾಬಿಯ ಅಬುಮುರೇಖಾದಲ್ಲಿ 27 ಎಕರೆ ವಿಸ್ತೀರ್ಣದಲ್ಲಿ ಸುಮಾರು 880 ಕೋಟಿ ರೂ. ವೆಚ್ಚದಲ್ಲಿ ದೇವಾಲಯ ನಿರ್ಮಾಣ ಮಾಡಲಾಗುತ್ತಿದೆ. ಬಿಎಪಿಎಸ್ ಅಬುದಾಬಿ ಹಿಂದೂ ಮಂದಿರ ನಿರ್ಮಿಸುತ್ತಿದೆ. ಇಲ್ಲಿಯವರೆಗೆ 4500 ಕ್ಯೂಬಿಕ್ ಮೀಟರ್ ಕಾಂಕ್ರೀಟ್ ಹಾಕಲಾಗಿದೆ. 3000 ಮೀಟರ್ ಬ್ಯಾಕ್ಫಿಲ್ಲಿಂಗ್ ಮಾಡಲಾಗಿದೆ. ಅಡಿಪಾಯದ ಸುರಂಗಗಳ ಕಾಮಗಾರಿ ಮುಂದಿನ ವಾರ ಶುರುವಾಗಲಿದೆ.