75 ವರ್ಷಗಳ ಹಿಂದೆ ಉಪಖಂಡದ ಇಬ್ಭಾಗದ ಸಂದರ್ಭ ದೂರವಾಗಿದ್ದ ಒಡಹುಟ್ಟಿದವರಿಬ್ಬರು ಪಾಕಿಸ್ತಾನದ ಕರ್ತಾರ್ಪುರ ಸಾಹಿಬ್‌ನಲ್ಲಿ ಮತ್ತೆ ಒಂದುಗೂಡಿದ್ದಾರೆ.
ಭಾರತದಲ್ಲಿ ವಾಸಿಸುತ್ತಿರುವ ಮಹೇಂದರ್ ಕೌರ್, 81, ತನ್ನ ಸಹೋದರ, ಶೇಖ್ ಅಬ್ದುಲ್ ಅಜ಼ೀಜ಼್, 78, ಈ ಒಡಹುಟ್ಟಿದವರಾಗಿದ್ದಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ವಾಸಿಸುವ ಅಬ್ದುಲ್ ಅಜ಼ೀಜ಼್ ಸಾಮಾಜಿಕ ಜಾಲತಾಣದ ಮೂಲಕ ತನ್ನ ಸಹೋದರಿಯನ್ನು ಪತ್ತೆ ಮಾಡಿದ್ದಾರೆ ಎಂದು ಪಾಕ್ ದೈನಿಕ ಡಾನ್ ನ್ಯೂಸ್ ವರದಿ ಮಾಡಿದೆ.
ಉಪಖಂಡದ ಇಬ್ಭಾಗದ ವೇಳೆ ಸರ್ದಾರ್ ಭಜನ್ ಸಿಂಗ್ ಕುಟುಂಬವು ಹಿಂಸಾಚಾರದ ವೇಳೆ ಚೆಲ್ಲಾಪಿಲ್ಲಿಯಾಗಿದ್ದು, ಈ ವೇಳೆ ಅಜ಼ೀಜ಼್ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ತಪ್ಪಿಸಿಕೊಂಡಿದ್ದಾರೆ. ಸಣ್ಣ ವಯಸ್ಸಿನಲ್ಲೇ ಮದುವೆಯಾದ ಅಜ಼ೀಜ಼್ ತನ್ನ ಹೆತ್ತವರು ಹಾಗೂ ಒಡಹುಟ್ಟಿದವರನ್ನು ಭೇಟಿ ಮಾಡುವ ಆಸೆಯನ್ನು ಮನದಲ್ಲಿ ಇಟ್ಟುಕೊಂಡೇ ಜೀವನ ಸವೆಸಿದ್ದಾರೆ.
ಸಾಮಾಜಿಕ ಜಾಲತಾಣದ ಪೋಸ್ಟ್ ಒಂದರ ಮೂಲಕ ಮಹೇಂದ್ರ ಹಾಗೂ ಅಜ಼ೀಜ಼್ ಇಬ್ಬರೂ ಒಂದೇ ಕುಟುಂಬದವರು ಎಂದು ತಿಳಿದು ಬಂದಿದೆ.
ಕರ್ತಾರ್ಪುರದ ಗುರುದ್ವಾರಾದಲ್ಲಿ ಇಬ್ಬರೂ ಭೇಟಿಯಾಗಿದ್ದು, ದಶಕಗಳ ಬಳಿಕ ಸಂಧಿಸುತ್ತಿರುವ ಸಂತಸದಲ್ಲಿ ಅವರ ಆನಂದಕ್ಕೆ ಪಾರವೇ ಇರಲಿಲ್ಲ. ಈ ವೇಳೆ ಇಬ್ಬರೂ ಸಿಹಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.
ನಾಲ್ಕು ಕಿಮೀ ಉದ್ದದ ಕರ್ತಾರ್ಪುರ ಕಾರಿಡಾರ್ ಭಾರತದ ಯಾತ್ರಿಗಳಿಗೆ ವೀಸಾ ರಹಿತ ಪ್ರವೇಶ ನೀಡುತ್ತದೆ. ಸಿಖ್ ಧರ್ಮದ ಸ್ಥಾಪಕ ಗುರು ನಾನಕ್ ದೇವ್‌ರ ಅಂತಿಮ ವಿಶ್ರಾಂತಿ ತಾಣವಾದ ಕರ್ತಾರ್ಪುರ ಸಾಹೀಬ್‌ನಲ್ಲಿ ಭಾರತ ಹಾಗು ಪಾಕ್ ಪ್ರಜೆಗಳು ಪರಸ್ಪರ ಭೇಟಿಯಾಗಿ, ಪರಸ್ಪರರ ಕುರಿತಾದ ಅನೇಕ ಕುತೂಹಲಗಳನ್ನು ತಣಿಸಿಕೊಳ್ಳುತ್ತಾರೆ.