ಶಿವಮೊಗ್ಗ: ಕೈಬರಹದ ಪಹಣಿ ಪತ್ರಿಕೆ ನೀಡಲು 2000 ರೂ. ಲಂಚ ಪಡೆಯುತ್ತಿದ್ದ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕಚೇರಿ ನೌಕರ ಬಸವರಾಜ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಸಾಗರದ ಎಸ್ಎನ್ ನಗರ ಬಡಾವಣೆಯ ಆಸೀಬ್ ತಮ್ಮ ಸ್ನೇಹಿತ ರೋಹಿದ್ ಅಬ್ದುಲ್ ಅವರಿಗೆ ಸೇರಿದ ಜಮೀನಿನ ಪಹಣಿ ತೆಗೆಸಲು ಬಸವರಾಜ್ ಅವರಿಗೆ 1,500 ರೂ. ಲಂಚದ ಹಣ ನೀಡಿದ್ದರು. ಮತ್ತೆ 2,000 ರೂ. ನೀಡುವಂತೆ ಬಸವರಾಜ್ ಒತ್ತಾಯಿಸಿದ್ದರು. ಈ ಮೊದಲು ಹಣ ನೀಡುವ ಸಂದರ್ಭದಲ್ಲಿ ಆಸೀಬ್ ವಿಡಿಯೋ ಮಾಡಿಕೊಂಡಿದ್ದರು. ಮತ್ತೆ ಹಣ ಕೇಳಿದಾಗ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ಲಂಚದ ಹಣ ಸ್ವೀಕರಿಸುತ್ತಿದ್ದಾಗಲೇ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಬಸವರಾಜ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಹೆಚ್.ಎಸ್. ಸುರೇಶ್, ಉಮೇಶ್, ಯೋಗೇಶ್ ನಾಯ್ಕ್, ಸುರೇಂದ್ರ, ಚನ್ನೇಶ್, ಪ್ರಭು ನಾಯಕ, ಪುಟ್ಟಮ್ಮ, ಗಂಗಾಧರ, ಜಯಂತಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.