ಶಿವಮೊಗ್ಗ: ಗುತ್ತಿಗೆದಾರನಿಂದ ಲಂಚ ಪಡೆಯುತ್ತಿದ್ದ ಇಬ್ಬರು ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ಬಂಧಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ನೀರಾವರಿ ನಿಗಮದ ಸೆಕ್ಷನ್ ಆಫೀಸರ್ ಕೊಟ್ರಪ್ಪ ಹಾಗೂ ಅರವಿಂದ್ ಬಂಧಿತ ಆರೋಪಿಗಳು. ಭದ್ರಾ ಅಣೆಕಟ್ಟೆಯ ಗೊಂದಿ ಬಲದಂಡೆ ನಾಲೆಯ ಸಿಲ್ಟ್ ತೆಗೆಯಲು ಕಾಮಗಾರಿ ಟೆಂಡರ್ ಕರೆಯಲಾಗಿತ್ತು. 2024ರ ಜನವರಿಯಲ್ಲಿ ಕಾಮಗಾರಿಯೂ ಪೂರ್ಣಗೊಂಡಿತ್ತು. ಆದರೆ ಟೆಂಡರ್ ಹಣ 9,36,999 ಲಕ್ಷ ರೂ ಗುತ್ತಿಗೆದಾರರಿಗೆ ಮಂಜೂರಾಗಿರಲಿಲ್ಲ. ಮಂಜೂರಾತಿಗಾಗಿ ಹಲವು ಬಾರಿ ಮನವಿ ಮಾಡಿದರೂ ಹಣ ಬಿಡುಗಡೆ ಮಾಡಿರಲಿಲ್ಲ. ಹಣ ಮಂಜೂರಾತಿಗಾಗಿ ನೀರಾವರಿ ನಿಗಮದ ಸೆಕ್ಷನ್ ಆಫೀಸರ್ ಕೊಟ್ರಪ್ಪ 1.20 ಲಕ್ಷ ಲಂಚಕ್ಕೆ ಬಳ್ಳಾರಿ ಗುತ್ತಿಗೆದಾರ ರವಿ ಎಂಬುವವರಿಗೆ ಬೇಡಿಕೆ ಇಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಗುತ್ತಿಗೆದಾರ ರವಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಕೊಟ್ರಪ್ಪ ಅವರ ಕಚೇರಿಯ ಲೈಟ್ ಮಜದೂರ್ ಅರವಿಂದ ಎಂಬುವವರಿಂದ ಕೊಟ್ರಪ್ಪ 1.20 ಲಕ್ಷ ರೂ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಕೊಟ್ರಪ್ಪ ಹಾಗೂ ಅರವಿಂದ ಇಬ್ಬರನ್ನೂ ಬಂಧಿಸಿದ್ದಾರೆ.