ಕೊಪ್ಪಳ: ಕೊಪ್ಪಳದ ಕೃಷಿ ಇಲಾಖೆ ಉಪ ನಿರ್ದೇಶಕ ಸಹದೇವ ಯರಗುಪ್ಪ ಅವರಿಗೆ ಸೇರಿದ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಅಕ್ರಮ ಸಂಪತ್ತು ಹೊಂದಿರುವುದು ಪತ್ತೆಯಾಗಿದೆ.
ಕೊಪ್ಪಳದ ಬಿ.ಟಿ. ಪಾಟೀಲ ನಗರದ ಬಾಡಿಗೆ ಮನೆ, ಗದಗದ ಮನೆ, ಕಚೇರಿ ಹಾಗೂ ರೋಣ ತಾಲೂಕಿನ ಮೆಣಸಗಿಯಲ್ಲಿರುವ ಮನೆ ಸೇರಿ ಒಟ್ಟು ಎಂಟು ಕಡೆ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಎರಡು ವರ್ಷಗಳಿಂದ ಸಹದೇವ ಕೊಪ್ಪಳ ಕೃಷಿ ಇಲಾಖೆ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಅಕ್ರಮ ಆಸ್ತಿ ಸಂಪಾದನೆ ಆರೋಪ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಗುರುವಾರ ದಾಳಿ ನಡೆಸಿ ಪರಿಶೀಲಿಸಿದೆ.
ದಾಳಿಯ ಸಂದರ್ಭದಲ್ಲಿ ಸಹದೇವ ಅವರು 17 ನಿವೇಶನ, ಮೂರು ವಾಣಿಜ್ಯ ಮಳಿಗೆ, 826 ಗ್ರಾಂ ಚಿನ್ನಾಭರಣ, ಬ್ಯಾಂಕ್ ಖಾತೆಯಲ್ಲಿ 40 ಲಕ್ಷ ರೂಪಾಯಿ, ಮನೆಯಲ್ಲಿ 7 ಲಕ್ಷ ರೂಪಾಯಿ, 27 ಎಕರೆ ಕೃಷಿ ಜಮೀನು ಹೊಂದಿದ್ದಾರೆ. ಅವರು ಆದಾಯಕ್ಕಿಂತ ಶೇಕಡ 113 ರಷ್ಟು ಅಧಿಕ ಪ್ರಮಾಣದಲ್ಲಿ ಆಸ್ತಿ ಗಳಿಸಿದ್ದಾರೆ ಎಂದು ಗೊತ್ತಾಗಿದೆ.