ಶಿವಮೊಗ್ಗ: ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ ವೇಳೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಜೋಗ -ಕಾರ್ಗಲ್ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಸಿ. ಹರೀಶ್ 50,000 ರೂ.ಗಳನ್ನು ಗ್ಯಾಸ್ ಸ್ಟವ್ ಮೇಲೆ ಇಟ್ಟು ಸುಟ್ಟು ಹಾಕಿದ ಘಟನೆ ಸೋಮವಾರ ನಡೆದಿದೆ.
ಜೋಗಫಾಲ್ಸ್ ನಲ್ಲಿ ವಾಸವಿರುವ ಕೆ. ಅಹ್ಮದ್ ಅಬ್ದುಲ್ ಬಾಕಿ ಅವರು 15 ವರ್ಷಗಳಿಂದ ಕೋಳಿ ಮಾಂಸದ ಅಂಗಡಿ ನಡೆಸುತ್ತಿದ್ದು, ಅವರ ಅಂಗಡಿಗೆ ಲೈಸೆನ್ಸ್ ಇಲ್ಲದ ಕಾರಣ ಪಟ್ಟಣ ಪಂಚಾಯಿತಿ ಅಧಿಕಾರಿಗಳು ತೆರವಿಗೆ ಸೂಚನೆ ನೀಡಿದ್ದರು.
ನಂತರ ಕೋಳಿ ಅಂಗಡಿ ನಡೆಸಿಕೊಂಡು ಹೋಗಲು ವ್ಯಾಪಾರದ ಪರವಾನಿಗೆಗಾಗಿ ಪಟ್ಟಣ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ವ್ಯಾಪಾರದ ಪರವಾನಿಗಿ ಇನ್ನೂ ಸಿಗದ ಕಾರಣ ಅಂಗಡಿ ತೆರವುಗೊಳಿಸಿ ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹೇಳಿದ್ದಾರೆ.
ಪರವಾನಿಗೆ ಕೊಡಿಸಲು ಪಟ್ಟಣ ಪಂಚಾಯಿತಿ ಸದಸ್ಯ ಹರೀಶ್ 50,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಅಹ್ಮದ್ ಅಬ್ದುಲ್ ಶಿವಮೊಗ್ಗದ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ. ಸೋಮವಾರ ಹರೀಶ್ ಮನೆಗೆ ಲಂಚದ ಹಣ ಕೊಡಲು ಅಹ್ಮದ್ ತೆರಳಿದ್ದು, ಹಣ ಪಡೆದುಕೊಳ್ಳುತ್ತಿದ್ದಂತೆ ಲೋಕಾಯುಕ್ತ ಪೊಲೀಸ್ ತಂಡ ಹರೀಶ್ ಮನೆ ಮೇಲೆ ದಾಳಿ ಮಾಡಿದೆ. ಇದನ್ನು ಗಮನಿಸಿದ ಹರೀಶ್ ತಮ್ಮ ಕೈಯಲ್ಲಿದ್ದ ಲಂಚದ ಹಣವನ್ನು ಗ್ಯಾಸ್ ಸ್ಟವ್ ಮೇಲೆ ಇಟ್ಟು ಸುಟ್ಟು ಹಾಕಿದ್ದಾರೆ. ಅವರನ್ನು ಬಂಧಿಸಲಾಗಿದೆ.
ನಿನ್ನ ಅಂಗಡಿ ತೆರವುಗೊಳಿಸದಂತೆ ನೋಡಿಕೊಳ್ಳುತ್ತೇನೆ. ಪ್ರತಿ ತಿಂಗಳು 3 ಸಾವಿರ ರೂ. ಕೊಡಬೇಕು ಎಂದು ಹರೀಶ್ ಹೇಳಿದ್ದು, ಪ್ರತಿ ತಿಂಗಳು ಮೂರು ಸಾವಿರ ರೂಪಾಯಿ ಕೊಡಲು ಅಹ್ಮದ್ ಅಬ್ದುಲ್ ಒಪ್ಪಿಲ್ಲ. ಆಗ ಒಂದೇ ಬಾರಿಗೆ 50,000 ರೂ. ಕೊಟ್ಟಲ್ಲಿ ಪಟ್ಟಣ ಪಂಚಾಯಿತಿಯವರಿಗೆ ಹೇಳಿ ಯಾರಿಂದಲೂ ಯಾವುದೇ ರೀತಿ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ಹರೀಶ್ ತಿಳಿಸಿದ್ದಾರೆ. ಇಂದು ಲಂಚದ ಹಣ ಪಡೆಯುವಾಗ ದಾಳಿ ಮಾಡಿ ಅವರನ್ನು ಬಂಧಿಸಲಾಗಿದೆ.
ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಹೆಚ್. ರಾಧಾಕೃಷ್ಣ ತನಿಖೆ ಕೈಗೊಂಡಿದ್ದಾರೆ. ಚಿತ್ರದುರ್ಗ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎನ್. ವಾಸುದೇವರಾಮ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಲಾಗಿದೆ.
ಶಿವಮೊಗ್ಗ ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕ ಎನ್. ಮೃತ್ಯುಂಜಯ, ನಿರೀಕ್ಷಕ ಹೆಚ್.ಎಂ. ಜಗನ್ನಾಥ, ಸಿಬ್ಬಂದಿಗಳಾದ ಪ್ರಸನ್ನ, ಬಿ. ಲೋಕೇಶಪ್ಪ, ಮಹಾಂತೇಶ, ಬಿ.ಟಿ. ಚನ್ನೇಶ, ಪ್ರಶಾಂತ್ ಕುಮಾರ್, ಅರುಣ್ ಕುಮಾರ್, ಪುಟ್ಟಮ್ಮ, ಸಾವಿತ್ರಮ್ಮ, ಗಂಗಾಧರ, ತರುಣ್ ಕುಮಾರ್, ಪ್ರದೀಪ್ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.