ಮಡಿಕೇರಿ: ಕೊಡಗು ಉಪ ಅರಣ್ಯ ಸಂರಕ್ಷಣಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಹೆಚ್. ಪೂರ್ಣಿಮಾ ಲೋಕಾಯುಕ್ತ ಬಲೆಗೆ ಬಿದ್ದವರು. 50 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲಿ ಅವರು ಸಿಕ್ಕಿಬಿದ್ದಿದ್ದಾರೆ.
ತಮ್ಮ ಅಧೀನ ಅಧಿಕಾರಿಯೊಬ್ಬರಿಂದ 50 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆಯಲ್ಲಿ ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್ ಪೂರ್ಣಿಮಾ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅರಣ್ಯ ಇಲಾಖೆಯಿಂದ 1.60 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದ್ದು, ಇದರಲ್ಲಿ ಶೇಕಡ 60ರಷ್ಟು ಹಣವನ್ನು ತನಗೆ ನೀಡುವಂತೆ ಅಧೀನ ಅಧಿಕಾರಿಗೆ ಪೀಡಿಸುತ್ತಿದ್ದರು. ಲಂಚ ಪಡೆಯದೇ ಕಾಮಗಾರಿ ನಡೆಸುತ್ತಿರುವುದಾಗಿ ಹೇಳಿದ್ದರೂ ಒಂದು ಲಕ್ಷ ರೂಪಾಯಿ ಕೊಡಬೇಕು. ಇಲ್ಲದಿದ್ದರೆ ಸಸ್ಪೆಂಡ್ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಇಂದು ಮುಂಗಡವಾಗಿ 50 ಸಾವಿರ ರೂಪಾಯಿ ಪಡೆದುಕೊಳ್ಳುವಾಗ ಅವರನ್ನು ಬಂಧಿಸಲಾಗಿದೆ. ಮೈಸೂರು ವಿಭಾಗದ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಡಿವೈಎಸ್ಪಿಗಳಾದ ಕೃಷ್ಣಯ್ಯ, ಪವನ್ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಇನ್ಸ್ ಪೆಕ್ಟರ್ ಗಳಾದ ಲೋಕೇಶ್, ಜಯರತ್ನಾ ಹಾಗೂ ಸಿಬ್ಬಂದಿಗಳಾದ ಲೋಕೇಶ್, ಮಂಜುನಾಥ, ಸಲಾಹುದ್ದೀನ್, ದೀಪಿಕಾ, ಅರುಣ್ ಕುಮಾರ್, ತ್ರಿವೇಣಿ, ಪ್ರಕಾಶ್, ಲೋಕೇಶ್, ಶಶಿ ಭಾಗವಹಿಸಿದ್ದರು.