ದಾವಣಗೆರೆ: ದಾವಣಗೆರೆ ವಿಶೇಷ ಭೂಸ್ವಾಧೀನಾಧಿಕಾರಿ ಮತ್ತು ಕಚೇರಿ ವ್ಯವಸ್ಥಾಪಕ 30,000 ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ವಿಶೇಷ ಭೂಸ್ವಾದಿನಾಧಿಕಾರಿ ರಮೇಶ್, ಕಚೇರಿ ವ್ಯವಸ್ಥಾಪಕ ಶ್ರೀನಿವಾಸ ಅವರು ಬಲೆಗೆ ಬಿದ್ದವರು ಎಂದು ಹೇಳಲಾಗಿದೆ. ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯ ಕಟ್ಟಡದಲ್ಲಿರುವ ಭೂಸ್ವಾಧೀನಾಧಿಕಾರಿ ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕಚೇರಿಯಲ್ಲಿ ಅವರು ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಲು ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲೇ ದಾಳಿ ನಡೆಸಲಾಗಿದೆ. ಹಾವೇರಿ ತಾಲೂಕಿನ ಕೋಳೂರಿನ ಸಂತೋಷ್ ಅವರಿಂದ ಲಂಚ ಸ್ವೀಕರಿಸುತ್ತಿದ್ದ ಹಿರಿಯ ಕೆಎಎಸ್ ಅಧಿಕಾರಿ ಜಿ.ಡಿ. ಶೇಖರ್ ಮತ್ತು ಕಚೇರಿ ವ್ಯವಸ್ಥಾಪಕ ಶ್ರೀನಿವಾಸ ಬಲೆಗೆ ಬಿದ್ದಿದ್ದಾರೆ.
ಹಾವೇರಿ, ದಾವಣಗೆರೆ ಸೇರಿದಂತೆ 6 ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ದಾವಣಗೆರೆಯ ವಿಶೇಷ ಭೂಸ್ವಾಧೀನಾಧಿಕಾರಿ ಜಿ.ಡಿ. ಶೇಖರ್, ಶ್ರೀನಿವಾಸ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪುರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.