ಶಿವಮೊಗ್ಗ: ಲಂಚ ಸ್ವೀಕರಿಸುತ್ತಿದ್ದ ಶಿವಮೊಗ್ಗ ತಾಲೂಕಿನ ಅಬಲಗೆರೆ ಗ್ರಾಮ ಪಂಚಾಯಿತಿ ಗ್ರೇಡ್ 2 ಕಾರ್ಯದರ್ಶಿ ಯೋಗೇಶ್ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಶಿವಮೊಗ್ಗದ ನವುಲೆ ನಿವಾಸಿ ಬಿ. ಯಶವಂತ ಅವರಿಂದ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಶಿವಮೊಗ್ಗದ ಚೆನ್ನಮುಂಭಾಪುರದಲ್ಲಿ ಯಶವಂತ ಅವರು ನಿವೇಶನ ಹೊಂದಿದ್ದು, ಈ ಜಾಗವನ್ನು ತನ್ನ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಅಬ್ಬಲಗೆರೆ ಗ್ರಾಮ ಪಂಚಾಯಿತಿ ಗ್ರೇಡ್ 2 ಕಾರ್ಯದರ್ಶಿ ಯೋಗೇಶ್ ಅವರ ಬಳಿ ಆರು ತಿಂಗಳ ಹಿಂದೆಯೇ ದಾಖಲೆ ಪತ್ರಗಳ ಸಹಿತ ಅರ್ಜಿ ಸಲ್ಲಿಸಿದ್ದರು.
ಜಾಗ ಅಪ್ರೂವ್ ಮಾಡಿಕೊಡಲು 15,000 ರೂ. ಲಂಚಕ್ಕೆ ಯೋಗೇಶ್ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಲೋಕಾಯುಕ್ತ ಪೊಲೀಸ್ ಠಾಣೆಗೆ ಯಶವಂತ್ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಇಂದು ಲಂಚ ಸ್ವೀಕರಿಸುತ್ತಿದ್ದಾಗ ದಾಳಿ ಮಾಡಿದ್ದಾರೆ. 15,000 ಲಂಚದ ಹಣ ಜಪ್ತಿ ಮಾಡಲಾಗಿದ್ದು, ಯೋಗೀಶ್ ಅವರನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ.
ಲೋಕಾಯುಕ್ತ ಪೋಲಿಸ್ ಅಧೀಕ್ಷಕ ಮಂಜುನಾಥ ಚೌದರಿ ಎಂ.ಹೆಚ್., ಪೊಲೀಸ್ ಉಪಾಧೀಕ್ಷಕ ಉಮೇಶ್ ಈಶ್ವರನಾಯ್ಕ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಲೋಕಾಯುಕ್ತ ಕಚೇರಿಯ ಪೊಲೀಸ್ ನಿರೀಕ್ಷಕರಾದ ವೀರಬಸಪ್ಪ ಎಲ್. ಕುಸಲಾಪುರ, ಪ್ರಕಾಶ್, ಹೆಚ್.ಎಸ್. ಸುರೇಶ್, ಸಿಬ್ಬಂದಿಯಾದ ಯೋಗೇಶ್, ಸುರೇಂದ್ರ, ಪ್ರಶಾಂತ ಕುಮಾರ್, ರಘು ನಾಯ್ಕ, ದೇವರಾಜ್, ಪುಟ್ಟಮ್ಮ, ಪ್ರದೀಪ್, ಗೋಪಿ, ಜಯಂತ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.