ಬೆಂಗಳೂರು: ಎಲೆಕ್ಟ್ರಿಕಲ್ ಕೇಬಲ್ ಮರು ಅಳವಡಿಕೆ ಕಾಮಗಾರಿ ಸಂಬಂಧ 25 ಸಾವಿರ ರೂಪಾಯಿ ಲಂಚ ಸ್ವೀಕರಿಸಿದ್ದ ಇಬ್ಬರು ಬೆಸ್ಕಾಂ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಬೆಸ್ಕಾಂ ಸಹಾಯಕ ಇಂಜಿನಿಯರ್ ಬಿ. ಪ್ರವೀಣ್, ಗ್ಯಾಂಗ್ ಮನ್ ಸುರೇಶ್ ಬಂಧಿತರು. ಕಂಪನಿಯ ಎಲೆಕ್ಟ್ರಿಕಲ್ ಕೇಬಲ್ ಮರು ಅಳವಡಿಕೆ ಕಾಮಗಾರಿ ಸಂಬಂಧ ಲಂಚ ಸ್ವೀಕರಿಸಿದ್ದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.
ಶ್ರೀ ಚಕ್ರ ಎಲೆಕ್ಟ್ರಿಕಲ್ ಕಂಪನಿಗೆ ಕೇಬಲ್ ಮರು ಅಳವಡಿಕೆ ಕಾಮಗಾರಿ ಸಂಬಂಧ ಅನುಮತಿ ನೀಡುವಂತೆ ಫೀಲ್ಡ್ ಇಂಜಿನಿಯರ್ ಬಿ.ಎಸ್. ರಘುನಂದನ್ ವಿಜಯನಗರದ ಪ್ರಶಾಂತ್ ನಗರದ ವಾರ್ಡ್ ನ ಬೆಸ್ಕಾಂ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಅನುಮತಿ ನೀಡಲು ಸಹಾಯಕ ಇಂಜಿನಿಯರ್ ಪ್ರವೀಣ್ 35,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದು, ರಘುನಂದನ್ ದೂರು ನೀಡಿದ್ದರು. ಇಂಜಿನಿಯರ್ ಪ್ರವೀಣ್ ಪರ ಗ್ಯಾಂಗ್ ಮನ್ ಸುರೇಶ್ ದೂರುದಾರರಿಂದ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.